
ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಭಾರೀ ಪಿತೂರಿ ನಡೆದಿದೆ ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. [ಶಾರ್ಜೀಲ್ ಇಮಾಮ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ಇಮಾಮ್ ಮಾತ್ರವಲ್ಲದೆ ಉಮರ್ ಖಾಲಿದ್, ಮೊಹಮ್ಮದ್ ಸಲೀಂ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮೀರನ್ ಹೈದರ್, ಶಾದಾಬ್ ಅಹ್ಮದ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ಗುಲ್ಫಿಶಾ ಫಾತಿಮಾ ಅವರಿಗೆ ಸೆಪ್ಟೆಂಬರ್ 2 ರಂದು, ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಈ ತೀರ್ಪನ್ನು ಇಮಾಮ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ 2020 ರ ಫೆಬ್ರವರಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟಾಗಿತ್ತು. ದೆಹಲಿ ಪೊಲೀಸರ ಪ್ರಕಾರ ಘಟನೆಯಲ್ಲಿ 53 ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.
ಆರೋಪಿಗಳು ಗಲಭೆ ಉಂಟಾಗುವಂತೆ ದೊಡ್ಡ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ದೆಹಲಿ ಪೊಲೀಸ್ ವಿಶೇಷ ಘಟಕ ಐಪಿಸಿ ಮತ್ತು ಯುಎಪಿಎ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿತ್ತು.
ಬಹುತೇಕ ಆರೋಪಿಗಳ ಮೇಲೆ ವಿವಿಧ ಎಫ್‌ಐಆರ್‌ಗಳು ದಾಖಲಾಗಿದ್ದು ನ್ಯಾಯಾಲಯಗಳಲ್ಲಿ ಹಲವು ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಹೆಚ್ಚಿನವರು 2020 ರಿಂದ ಬಂಧನದಲ್ಲಿದ್ದಾರೆ.
ಇಮಾಮ್ ವಿರುದ್ಧ ಹಲವಾರು ರಾಜ್ಯಗಳಲ್ಲಿ ವಿವಿಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ದೇಶದ್ರೋಹ ಮತ್ತು ಯುಎಪಿಎ ಅಡಿ ಮಾಡಿದ ಆರೋಪಗಳಿಗೆ ಸಂಬಂಧಿಸಿದ್ದಾಗಿವೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಅವರು ಮಾಡಿದ ಭಾಷಣಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ, ಕಳೆದ ವರ್ಷ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಅಲಿಗಢ ಮತ್ತು ಗುವಾಹಟಿಯಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣಗಳಿಗೆ ಸಂಬಂಧಿಸಿದಂತೆ, 2021ರಲ್ಲಿ ಅಲಾಹಾಬಾದ್ ಹೈಕೋರ್ಟ್ ಮತ್ತು 2020ರಲ್ಲಿ ಗುವಾಹಟಿ ಹೈಕೋರ್ಟ್ ಕ್ರಮವಾಗಿ ಜಾಮೀನು ನೀಡಿದ್ದವು. ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿಯೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.