ಸ್ಥಳ: ಸುಪ್ರೀಂಕೋರ್ಟ್. ʼಗಂಗೂಬಾಯಿ ಕಾಠಿಯಾವಾಡಿʼ ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಯುತ್ತಿತ್ತು. ಕಾಠಿಯಾವಾಡಿಯ ದತ್ತುಪುತ್ರ ಎಂದು ಹೇಳಿಕೊಂಡಿದ್ದ ವ್ಯಕ್ತಿ ಅರ್ಜಿ ದಾಖಲಿಸಿದ್ದರು. ಚಿತ್ರದ ನಿರ್ಮಾಪಕಿ ಮತ್ತು ಸಿನಿಮಾದಲ್ಲಿ ಗಂಗೂಬಾಯಿ ಪಾತ್ರ ಪೋಷಿಸುತ್ತಿರುವ ನಟಿ ಆಲಿಯಾಭಟ್ ಮತ್ತಿತರರು ಪ್ರಕರಣದಲ್ಲಿ ಪ್ರತಿವಾದಿಗಳು.
ಪ್ರಕರಣವನ್ನು ಆಲಿಸುತ್ತಿದ್ದ ನ್ಯಾ. ಇಂದಿರಾ ಬ್ಯಾನರ್ಜಿ ಅವರು ನೆನಪೊಂದನ್ನು ಬಿಚ್ಚುತ್ತಿದ್ದಂತೆ ನ್ಯಾಯಾಲಯದಲ್ಲಿ ಆರ್ದ್ರ ಭಾವ. ನ್ಯಾಯಮೂರ್ತಿಗಳು ಹೇಳುತ್ತಿದ್ದುದು ಉದ್ಯೋಗದ ನೆಪದಲ್ಲಿ ವೇಶ್ಯಾವಾಟಿಕೆ ದಂಧೆಗೆ ತುತ್ತಾದ ಹೆಣ್ಣುಮಗಳೊಬ್ಬಳ ಕರುಣಾಜನಕ ಕತೆಯ ಕುರಿತು.
ಘಟನೆ ನಡೆದಾಗ ನ್ಯಾ. ಇಂದಿರಾ ಅವರು ಪಶ್ಚಿಮ ಬಂಗಾಳದ ಕಾನೂನು ಸೇವೆಗಳ ಪ್ರಾಧಿಕಾರದ ಸಂಪರ್ಕದಲ್ಲಿದ್ದರು. ಕಲ್ಕತ್ತಾ ಹೈಕೋರ್ಟ್ ಕಾನೂನು ನೆರವು ಸಮಿತಿಯ ಅಧ್ಯಕ್ಷರಾಗಿದ್ದರು. ಒಂದು ದಿನ ಮುಂಬೈನಲ್ಲಿ ಉದ್ಯೋಗ ಕೊಡಿಸುವ ಸೋಗಿನಲ್ಲಿ ವೇಶ್ಯಾವಾಟಿಕೆಗೆ ತುತ್ತಾದ ಹೆಂಗಸನ್ನು ಭೇಟಿಯಾದರು. ಅವರ ಆ ಅನುಭವ ಹೀಗಿದೆ:
ಒಮ್ಮೆ ಕಳ್ಳಸಾಗಾಣೆಗೆ ಒಳಗಾದ ಮಹಿಳೆಯನ್ನು ಕಂಡೆ. ನನಗೆ ಈಗಲೂ ಆಕೆಯ ಕತೆ ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ತುತ್ತು ಅನ್ನ ಹಾಕಲಾಗದ ಚಿಕ್ಕಮ್ಮನೊಂದಿಗೆ 14 ವರ್ಷದ ಹುಡುಗಿಯಾಗಿದ್ದಾಗ ಈ ಮಹಿಳೆ ಇದ್ದಳು. ಈ ವೇಳೆ ರೆಸ್ಟೋರೆಂಟ್ ಕೆಲಸಕ್ಕಾಗಿ ಮುಂಬೈಗೆ ಹೋಗಲು ಆಕೆಗೆ ಕರೆ ಬಂತು. ಹೊಟ್ಟೆ ತುಂಬಾ ಊಟವಾದರೂ ಸಿಗುತ್ತದಲ್ಲಾ ಎಂದು ಆ ಬಾಲಕಿ ಹೋಗಲು ಒಪ್ಪಿಕೊಂಡಳು. ಆದರೆ ಮುಂಬೈ ಸೇರಿದ ಮೇಲೆ ಆದದ್ದೇ ಬೇರೆ. ಆಕೆ ವೇಶ್ಯಾವೃತ್ತಿಗೆ ದೂಡಲ್ಪಟ್ಟಳು. ಗ್ರಾಹಕರು ಅವಳೊಂದಿಗೆ ಅಸುರಕ್ಷಿತವಾದ ಕಾಮದ ಬಯಕೆಯಲ್ಲಿದ್ದರು. ಕಡೆಗೊಬ್ಬ ಗ್ರಾಹಕ ಅವಳ ಮೇಲೆ ಕರುಣೆ ತೋರಿ ಆಕೆಯನ್ನು ಪತ್ರಕರ್ತರೊಬ್ಬರ ಬಳಿಗೆ ಕರೆದೊಯ್ದ, ಬಳಿಕ ಅವರು ಆಕೆಯನ್ನು ಎನ್‌ಜಿಒಗೆ ಸೇರಿಸಿದರು. ಆಕೆ ಎಚ್‌ಐವಿ ಸೋಂಕು ಸಹ ತಗುಲಿತ್ತು”.
ಹೀಗೆ ನೊಂದ ಮಹಿಳೆಯ ಕತೆ ಹೇಳುತ್ತಾ ತಮ್ಮ ಮನವನ್ನು ಆಳವಾಗಿ ಕಲಕಿದ ನಿರ್ದಿಷ್ಟ ಕ್ಷಣವೊಂದರ ಬಗ್ಗೆ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದರು "ಆ ಮಹಿಳೆ ನನ್ನ ಕೈಹಿಡಿದು ನಾನು ಮಾಡಿದ ತಪ್ಪೇನು ಎಂದು ಕೇಳಿದಳು. ಇದು ಅಲ್ಲಿನ ಬಹುತೇಕ ಜನರ ದುಸ್ಥಿತಿ” ಎಂದರು.
ಇಂತಹ ಬದುಕಿಗೆ ದೂಡಲ್ಪಟ್ಟ ಮಹಿಳೆಯರ ಬಗ್ಗೆ ನನಗೆ ಗೌರವವಿದೆ ಎಂದ ನ್ಯಾ. ಇಂದಿರಾ ಅವರು, ಅದೇ ವೇಳೆ ಈ ರೀತಿಯ ಸಂತ್ರಸ್ತೆಯರ ಕುಟುಂಬಗಳ ಭಾವನೆ, ಸಂವೇದನೆಗಳು ಬೇರೆಯದೇ ರೀತಿಯದು ಎಂದರು. ಆ ಹೆಂಗಸು ತನ್ನ ನೋವನ್ನು ಹಂಚಿಕೊಂಡ ಬಳಿಕ “ತನ್ನ ಹೆಸರು ಮತ್ತು ಊರಿನ ವಿವರವನ್ನು ಹೇಳಲಿಲ್ಲ” ಎಂದು ನ್ಯಾಯಮೂರ್ತಿಗಳು ನೆನಪಿಸಿಕೊಂಡರು.
ಇನ್ನು ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕಾಠಿಯಾವಾಡಿಯವರ ದತ್ತುಪುತ್ರ ಎಂದು ಹೇಳಿಕೊಂಡಿದ್ದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ. ಜೆ ಕೆ ಮಹೇಶ್ವರಿ ಅವರಿದ್ದ ಪೀಠ ತಿರಸ್ಕರಿಸಿತು.