
ಅತ್ಯಾಚಾರ ಪ್ರಕರಣದ ವಿಚಾರಣೆಯೊಂದರ ವೇಳೆ, ಸಂತ್ರಸ್ತ ಮಹಿಳೆಯೇ ತನಗೆ ಅಪಾಯ ತಂದುಕೊಂಡಿದ್ದು ಆಕೆಯ ಮೇಲಿನ ಅತ್ಯಾಚಾರಕ್ಕೆ ಆಕೆಯೇ ಕಾರಣ ಎಂದು ಅಲಾಹಾಬಾದ್ ಹೈಕೋರ್ಟ್ ಟೀಕಿಸಿದೆ [ನಿಶ್ಚಲ್ ಚಂದಕ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].
ದೆಹಲಿಯ ಹೌಜ್ ಖಾಸ್‌ನಲ್ಲಿರುವ ಬಾರ್ ಒಂದರಲ್ಲಿ ಭೇಟಿಯಾದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2024 ರಲ್ಲಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
"ಒಂದು ವೇಳೆ ಸಂತ್ರಸ್ತೆಯ ಆರೋಪ ನಿಜವೆಂದೇ ಒಪ್ಪಿಕೊಂಡರೂ ಎದುರಾದ ಅಪಾಯಕ್ಕೆ ಆಕೆಯೇ ಕಾರಣ ಎಂದು ತೀರ್ಮಾನಿಸಬಹುದು. ಸಂತ್ರಸ್ತೆಯೂ ತನ್ನ ಹೇಳಿಕೆಯಲ್ಲಿ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಕನ್ಯಾಪೊರೆ ಹರಿದಿರುವುದು ಕಂಡುಬಂದಿದೆ ಆದರೆ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಭಿಪ್ರಾಯ ನೀಡಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ನೋಯ್ಡಾ ಮೂಲದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿನಿಯಾಗಿದ್ದ ಮಹಿಳೆ ತನ್ನ ಮೂವರು ಗೆಳತಿಯರೊಂದಿಗೆ ದೆಹಲಿಯ ಬಾರ್‌ಗೆ ಹೋಗಿದ್ದರು. ಅಲ್ಲಿ, ಅವರು ಈಗಾಗಲೇ ಪರಿಚಯವಿದ್ದ ಕೆಲ ಪುರುಷರನ್ನು ಭೇಟಿಯಾಗಿದ್ದರು ಎಂದು ತಿಳಿದುಬಂದಿತ್ತು. ಅವರಲ್ಲಿ ಆರೋಪಿ ಕೂಡ ಇದ್ದ.
ಮದ್ಯದ ಅಮಲಿನಲ್ಲಿದ್ದ ಆರೋಪಿಯು ತನ್ನ ಜೊತೆ ಬರುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ. ಅವನ ಒತ್ತಾಯದಿಂದಾಗಿ, ಅವನ ಮನೆಗೆ "ವಿಶ್ರಾಂತಿ ಪಡೆಯಲು" ತೆರಳುವುದಕ್ಕಾಗಿ ಒಪ್ಪಿಕೊಂಡೆ. ಮಾರ್ಗದುದ್ದಕ್ಕೂ ಆತ ಅನುಚಿತವಾಗಿ ಸ್ಪರ್ಶಿಸುತ್ತಲೇ ಇದ್ದ. ನೋಯ್ಡಾದ ತನ್ನ ಜಾಗಕ್ಕೆ ಕರೆದೊಯ್ಯವ ಬದಲು ಗುರುಗ್ರಾಮದಲ್ಲಿರುವ ಆತನ ಸಂಬಂಧಿಕರ ಫ್ಲ್ಯಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಡಿಸೆಂಬರ್ 11, 2024ರಂದು ಬಂಧಿಸಲಾಗಿತ್ತು.
ಆದರೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿ ಈ ಆರೋಪಗಳನ್ನು ನಿರಾಕರಿಸಿದ್ದ. ಮಹಿಳೆಗೆ ನೆರವು ಬೇಕಿದ್ದರಿಂದ ಆಕೆಯೇ ನಾನಿದ್ದ ಸ್ಥಳಕ್ಕೆ ಬಂದು ವಿಶ್ರಾಂತಿ ಪಡೆಯಲು ಒಪ್ಪಿಕೊಂಡಿದ್ದಳು. ನಾನು ನನ್ನ ಸಂಬಂಧಿಕರ ಫ್ಲಾಟ್‌ಗೆ ಕರೆದೊಯ್ದು ಎರಡು ಬಾರಿ ಅತ್ಯಾಚಾರ ಎಸಗಿರುವುದು ಸುಳ್ಳು. ಇದು ಅತ್ಯಾಚಾರ ಪ್ರಕರಣವಲ್ಲ ಬದಲಿಗೆ ಸಮ್ಮತಿಯ ಲೈಂಗಿಕತೆಯ ವಿಚಾರ ಎಂದು ಹೇಳಿದ್ದ.
ಸಂತ್ರಸ್ತೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದು, ಆಕೆ ಕೃತ್ಯದ ನೈತಿಕತೆ ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥಳಾಗಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.
"ಪ್ರಕರಣದ ಸಂದರ್ಭ ಸನ್ನಿವೇಶಗಳನ್ನು ಪರಿಗಣಿಸಿ, ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಯ ಭಾಗೀದಾರಿಕೆ ಮತ್ತು ಪಕ್ಷಕಾರರ ಪರ ವಕೀಲರ ವಾದ ಮಂಡನೆ ಗಮನದಲ್ಲಿಟ್ಟುಕೊಂಡು, ಅರ್ಜಿದಾರರು ಜಾಮೀನಿಗೆ ಸೂಕ್ತವಾದ ವಾದ ಮಂಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಜಾಮೀನು ಅರ್ಜಿ ಪುರಸ್ಕರಿಸಲಾಗಿದೆ " ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಆರೋಪಿ ಪರವಾಗಿ ಹಿರಿಯ ವಕೀಲ ವಿನಯ್ ಸರನ್ ಮತ್ತು ವಕೀಲ ಬಲ್ಬೀರ್ ಸಿಂಗ್ ವಾದ ಮಂಡಿಸಿದ್ದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]