ಅಶ್ಲೀಲ ಚಿತ್ರ ಪ್ರಕರಣ: ನಟಿ ಶೆರ್ಲಿನ್‌ ಚೋಪ್ರಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಮುಂಬೈ ನ್ಯಾಯಾಲಯ

ಉದ್ಯಮಿ ರಾಜ್‌ ಕುಂದ್ರಾ ಸೇರಿದಂತೆ ಇತರರನ್ನು ಬಂಧಿಸಿದ ರೀತಿಯಲ್ಲಿ ತಮ್ಮನ್ನೂ ವಶಕ್ಕೆ ಪಡೆಯಬಹುದು ಎಂದು ಆತಂಕಗೊಂಡು ನಟಿ ಚೋಪ್ರಾ ಅವರು ಮುಂಬೈ ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.
Sherlyn Chopra, Mumbai Sessions Court
Sherlyn Chopra, Mumbai Sessions Court

ಅಶ್ಲೀಲ ಚಿತ್ರ ಪ್ರಕರಣದಲ್ಲಿ ಉದ್ಯಮಿ ರಾಜ್‌ ಕುಂದ್ರಾ ಬಂಧನವಾಗಿರುವ ಹಿನ್ನೆಲೆಯಲ್ಲಿ ತನ್ನನ್ನೂ ವಶಕ್ಕೆ ಪಡೆಯಬಹುದು ಎಂಬ ಭೀತಿಯಿಂದ ನಟಿ ಶೆರ್ಲಿನ್‌ ಚೋಪ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ಮುಂಬೈ ಸೆಷನ್ಸ್‌ ನ್ಯಾಯಾಲಯ ವಜಾ ಮಾಡಿದೆ.

ಚೋಪ್ರಾ ನಿರೀಕ್ಷಣಾ ಜಾಮೀನು ಮನವಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಸೋನಾಲಿ ಅಗರ್ವಾಲ್‌ ಅವರು ಆದೇಶ ಹೊರಡಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292, 293 (ಅಶ್ಲೀಲ ಸಾಮಾಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 67, 67ಎ (ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾಗ್ರಿಗಳ ಪ್ರಸಾರ) ಮತ್ತು ಮಹಿಳೆಯನ್ನು ಅಸಭ್ಯವಾಗಿ ಬಿಂಬಿಸುವ (ನಿಯಂತ್ರಣ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿರುವ ಎಫ್‌ಐಆರ್‌ನಿಂದಾಗಿ ತಮ್ಮ ಬಂಧನವಾಗಬಹುದು ಎಂದು ಚೋಪ್ರಾ ಅಳುಕು ಹೊಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಪ್ರಾ ಹೇಳಿಕೆ ದಾಖಲಿಸಿಕೊಳ್ಳುವ ಸಂಬಂಧ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 160ರ ಅಡಿ ಸಮನ್ಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ನೋಟಿಸ್‌ ಜಾರಿ ಮಾಡದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರಣಕ್ಕಾಗಿ ಚೋಪ್ರಾ ಆತಂಕಗೊಂಡಿದ್ದಾರೆ ಎಂದು ಮಂಗಳವಾರ ವಕೀಲ ಸಿದ್ಧೇಶ್‌ ಬೋರ್ಕರ್‌ ವಾದಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಯಾವೆಲ್ಲಾ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂಬುದು ಚೋಪ್ರಾಗೆ ತಿಳಿದಿಲ್ಲ. ಆಕೆಗೆ ಎಫ್‌ಐಆರ್‌ ಪ್ರತಿಯನ್ನಾಗಲೀ ಅಥವಾ ನಿರ್ದಿಷ್ಟ ಆರೋಪಗಳ ಬಗ್ಗೆ ಮಾಹಿತಿಯನ್ನಾಗಲೀ ನೀಡಿಲ್ಲ. ಹೀಗಾಗಿ, ಸತ್ಯಾಸತ್ಯತೆ ಪರಿಶೀಲಿಸದೇ ಜಾಮೀನು ರಹಿತ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿರುವುದರಿಂದ ತನ್ನನ್ನೂ ಪ್ರಕರಣದಲ್ಲಿ ಸಿಲುಕಿಸಬಹುದು ಎಂದು ಆಕೆ ಆತಂಕಿತರಾಗಿದ್ದಾರೆ ಎಂದು ಪೀಠದ ಗಮನ ಸೆಳೆದಿದ್ದಾರೆ.

ತನಿಖೆಗೆ ಸಹಕರಿಸಲು ಚೋಪ್ರಾ ಸಿದ್ಧವಾಗಿದ್ದಾರೆ. ಆದರೆ, ಇತರೆ ಆರೋಪಿಗಳನ್ನು ಬಂಧಿಸಿರುವ ರೀತಿಯಲ್ಲಿ ತಮ್ಮನ್ನು ವಶಕ್ಕೆ ಪಡೆಯಬಹುದು ಎಂದು ಅವರು ಆತಂಕಿತರಾಗಿದ್ದಾರೆ ಎಂದಿದ್ದಾರೆ.

ಎಫ್‌ಐಆರ್‌ಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ ದಾಖಲಿಸುವಾಗಿನ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಅಪರಾಧದ ದೊಡ್ಡ ಜಾಲವೇ ಇದೆ ಎಂದು ಅರ್ಜಿಗೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಸಂತ್ರಸ್ತರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರನ್ನು ಪತ್ತೆ ಹಚ್ಚುವ ಕೆಲಸವನ್ನು ಅಪರಾಧ ವಿಭಾಗ ಮಾಡುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ತನಿಖೆ ನಡೆಸುತ್ತಿರುವಾಗ ಚೋಪ್ರಾ ಅವರು ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

Also Read
ಅಶ್ಲೀಲ ಚಿತ್ರ ಪ್ರಕರಣ: ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ರಾಜ್‌ ಕುಂದ್ರಾ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವವರ ವಿರುದ್ಧ ಪ್ರಬಲ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಚೋಪ್ರಾ ಹೇಳಿಕೆ ದಾಖಲಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ಹೇಳಿದ್ದಾರೆ.

ಈ ಕಾರಣಕ್ಕಾಗಿ ಜುಲೈ 26ರಂದು ಚೋಪ್ರಾಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಅಪರಾಧ ವಿಭಾಗದ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವುದನ್ನು ಬಿಟ್ಟು ಚೋಪ್ರಾ ಈಗ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಹೇಳಿದೆ.

ವಾದ-ಪ್ರತಿವಾದಗಳನ್ನು ಆಲಿಸಿದ ಸೆಷನ್ಸ್‌ ನ್ಯಾಯಾಧೀಶರು ಚೋಪ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದರು.

Related Stories

No stories found.
Kannada Bar & Bench
kannada.barandbench.com