ಶಿರೂರು ಗುಡ್ಡ ಕುಸಿತ ಪ್ರಕರಣ: ಕೇಂದ್ರ ಸರ್ಕಾರದಿಂದ ಹೈಕೋರ್ಟ್‌ ಮಾಹಿತಿ ವಿವರ ಸಲ್ಲಿಕೆ

“ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ವರದಿ ಈಗಾಗಲೇ ಸಿದ್ಧವಾಗಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ತಿಳಿಸಿದ ಸರ್ಕಾರಿ ವಕೀಲರು.
Shirur landslide
Shirur landslide
Published on

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಉಂಟಾದ ಗುಡ್ಡ ಕುಸಿತದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದವರ ಪೈಕಿ ಎಂಟು ಜನರ ಶವ ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಕಾರ್ಯಾಚರಣೆ ತ್ವರಿತವಾಗಿ ಸಾಗಿದೆ ಎಂದು ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ವಕೀಲ ಶಿಜಿ ಮಲಯಾಳಿ ಹಾಗೂ ನವದೆಹಲಿಯ ಕೆ ಆರ್ ಸುಭಾಷ್‌ ಚಂದ್ರನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಹೆಚ್ಚುವರಿ ಸಾಲಿಸಿಟಿರ್‌ ಜನರಲ್‌ ಕೆ ಅರವಿಂದ ಕಾಮತ್‌ ಅವರು ಮಣ್ಣಿನಡಿ ಸಿಲುಕಿರುವವರ ಪತ್ತೆ ಹಾಗೂ ರಕ್ಷಣೆಗೆ ಕಳೆದ ಒಂದು ದಿನದಲ್ಲಿ ಕೈಗೊಂಡ ಕ್ರಮಗಳ ಕುರಿತಾದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.

Also Read
ಗುಡ್ಡ ಕುಸಿತ: ರಕ್ಷಣೆ, ತೆರವು ಕಾರ್ಯಾಚರಣೆ ವಸ್ತುಸ್ಥಿತಿ ವರದಿ ಸಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚನೆ

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು “ಕೇಂದ್ರ ಸರ್ಕಾರ ಸಲ್ಲಿಸಿರುವ ವರದಿ ಪರಿಶೀಲನೆ ನಡೆಸಿ ವಾದ ಮಂಡಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ವಕೀಲರು “ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ವರದಿ ಈಗಾಗಲೇ ಸಿದ್ಧವಾಗಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್‌ 1ಕ್ಕೆ ಮುಂದೂಡಿತು.

ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪತ್ತೆಗೆ, ಹೆದ್ದಾರಿಯಲ್ಲಿ ಬಿದ್ದಿರುವ ಕಲ್ಲು-ಮಣ್ಣು ತೆರವುಗೊಳಿಸಲು 24 ಗಂಟೆಗಳ ಕಾಲ ನಿರಂತರವಾಗಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಬೇಕು. ಸೇನಾ ಪಡೆಗಳನ್ನು ನಿಯೋಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com