ತಮ್ಮ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಕಿರೀಟ್ ಸೋಮೈಯ ಅವರ ವಿರುದ್ಧ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಮತ್ತು ಸಂಸದ ಸಂಜಯ್ ರಾವುತ್ ಅವರು ಮುಂಬೈ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
2022ರಿಂದ ಸೋಮೈಯ ಅವರು ರಾವುತ್ ವಿರುದ್ಧ ತಮ್ಮ ಟ್ವಿಟರ್ ಖಾತೆಯಲ್ಲಿ ಅನಗತ್ಯ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ರಾವುತ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಸೋಮೈಯ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಯೊಂದಿಗೆ ಟ್ವೀಟ್ ಮಾಡಿರುವುದನ್ನು ಗಮನಿಸಿದಾಗ ನನಗೆ ಆಘಾತ ಮತ್ತು ಆಶ್ಚರ್ಯವಾಯಿತು. ಯಾವುದೇ ದೃಢ ಸಾಕ್ಷ್ಯಗಳಿಲ್ಲದೆ ನನ್ನ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳು ಸಮಾಜ ಮತ್ತು ಸಾರ್ವಜನಿಕರ ದೃಷ್ಟಿಯಲ್ಲಿ ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ” ಎಂದು ರಾವುತ್ ದೂರಿನಲ್ಲಿ ವಿವರಿಸಿದ್ದಾರೆ.
ಸಾರ್ವಜನಿಕವಾಗಿ ತನ್ನ ವ್ಯಕ್ತಿತ್ವಕ್ಕೆ ಕಳಂಕ ತರಲು ನೀಡಲಾದ ಈ ಹೇಳಿಕೆಗಳು ಸೋಮೈಯ ಅವರ ಪುಟದಲ್ಲಿ ಇನ್ನೂ ಲಭ್ಯ ಇವೆ. ಇಂತಹ ದುರುದ್ದೇಶಪೂರಿತ ಹೇಳಿಕೆಗಳು ಸೋಮೈಯ ಅವರ ಸಂಪೂರ್ಣ ಬೇಜವಾಬ್ದಾರಿ ಮನೋಭಾವ ಸೂಚಿಸುತ್ತವೆ ಎಂದು ರಾವುತ್ ಹೇಳಿದ್ದಾರೆ.
ಹೀಗಾಗಿ ಐಪಿಸಿ ಸೆಕ್ಷನ್ 499, 500ರ ಅಡಿಯಲ್ಲಿ ನಡೆದ ಅಪರಾಧವನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಸೋಮೈಯ ಅವರನ್ನು ಆರೋಪಿಯಾಗಿ ಪರಿಗಣಿಸಬೇಕು ಎಂದು ಮುಂಬೈನ ಮುಲುಂಡ್‌ನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ರಾವುತ್ ಮನವಿ ಮಾಡಿದ್ದಾರೆ.