ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಒಂಭತ್ತು ಮಂದಿಯ ವಿರುದ್ಧ ಮೊದಲನೇ ಹೆಚ್ಚುವರಿ ಆರೋಪ ಪಟ್ಟಿಯನ್ನು ಶುಕ್ರವಾರ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದೆ. ವಿಧ್ವಂಸಕ ಕೃತ್ಯ, ಹಿಂಸಾಚಾರದ ಮೂಲಕ ಐಸಿಸ್ ಚಟುವಟಿಕೆ ನಡೆಸಲು ಉದ್ದೇಶಿಸಿದ್ದ ಆರೋಪದ ಮೇಲೆ 2023ರ ಮಾರ್ಚ್ 16ರಂದು ಇಬ್ಬರ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿತ್ತು.
ಭಾರತದಲ್ಲಿ ವಿಧ್ವಂಸಕ ಕೃತ್ಯಗಳ ಮೂಲಕ ಜನರಲ್ಲಿ ಭೀತಿ ಹುಟ್ಟಿಸಲು ಹಾಗೂ ದೇಶದ ಮೇಲೆ ಯುದ್ದ ಸಾರಲು ಆರೋಪಿಗಳು 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ಪರೀಕ್ಷಾರ್ಥವಾಗಿ (ಟ್ರಯಲ್) ಐಇಡಿ ಸ್ಫೋಟ ನಡೆಸಿದ್ದರು ಎಂದು ಎನ್‌ಐಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕದವರೇ ಆದ ಮೊಹಮ್ಮದ್ ಶಾರಿಖ್, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರೀಶಾನ್ ತಾಜುದ್ದೀನ್ ಶೇಖ್, ಹುಜೈರ್ ಫರ್ಹಾನ್ ಬೇಗ್, ಮಜಿನ್ ಅಬ್ದುಲ್ ರಹಮಾನ್, ನದೀಮ್ ಅಹ್ಮದ್ ಕೆ ಎ, ಜಬೀವುಲ್ಲಾ, ನದೀಪ್ ಫೈಜಲ್ ಎನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120ಬಿ, 122 ಹಾಗೂ ಕಾನೂನುಬಾಹಿರ ಚುಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ವಿವಿಧ ಸೆಕ್ಷನ್‌ಗಳು, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ನಷ್ಟ ನಿಯಂತ್ರಣ ಕಾಯಿದೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸೀನ್ ವಿರುದ್ಧ ಮಾರ್ಚ್‌ನಲ್ಲಿ ಈಗಾಗಲೇ ಬೇರೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರೀಷಾನ್ ತಾಜುದ್ದೀನ್ ಶೇಖ್, ಮಾಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹ್ಮದ್ ಕೆ ಎ ಅವರು ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿದ್ದಾರೆ. ಭವಿಷ್ಯದಲ್ಲಿ ಭಾರತದಲ್ಲಿ ಐಸಿಸ್ ಅಜೆಂಡಾ ವಿಸ್ತರಿಸಲು ಕೌಶಲ್ಯಭರಿತರಾಗುವ ಉದ್ದೇಶದಿಂದ ವಿದೇಶದಲ್ಲಿ ನೆಲೆಸಿರುವ ಐಸಿಸ್ ಸಂಚಾಲಕರು ಆರೋಪಿಗಳಾದ ಎಂಜಿನಿಯರ್ ವಿದ್ಯಾರ್ಥಿಗಳಿಗೆ ರೋಬಾಟಿಕ್ಸ್ ಕೋರ್ಸ್ ಕಲಿಯಲು ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.
ವಿದೇಶಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸಂಘಟನೆಗಳ ಜೊತೆಗೂಡಿ ಮೊಹಮ್ಮದ್ ಶಾರೀಖ್, ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸೀನ್ ಅವರು ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಮೂವರು ಆರೋಪಿಗಳು ಇತರೆ ಆರೋಪಿಗಳಲ್ಲಿ ತೀವ್ರವಾದದೆಡೆಗೆ ಆಕರ್ಷಿಸುವ ಮೂಲಕ ದೇಶದ ಭದ್ರತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡಲು ಅವರನ್ನು ಐಸಿಸ್‌ಗೆ ಸೇರ್ಪಡೆ ಮಾಡಿದ್ದರು ಎಂದು ಹೇಳಲಾಗಿದೆ.
ಆರೋಪಿಗಳನ್ನು ಆನ್‌ಲೈನ್ ಮೂಲಕ ನಿರ್ವಹಣೆ ಮಾಡುತ್ತಿದ್ದ ವಿದೇಶಿ ಹ್ಯಾಂಡ್ಲರ್‌ಗಳು ಆರೋಪಿಗಳಿಗೆ ಕ್ರಿಪ್ಟೊ ಕರೆನ್ಸಿ ಮೂಲಕ ಹಣಕಾಸಿನ ನೆರವು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 2022ರ ಸೆಪ್ಟೆಂಬರ್ 19ರಂದು ಮೊದಲಿಗೆ ಶಿವಮೊಗ್ಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ಎನ್‌ಐಎಗೆ ವಹಿಸಲಾಗಿತ್ತು. ತನಿಖಾ ಸಂಸ್ಥೆಯು 2022ರ ನವೆಂಬರ್ 15ರಂದು ಹೊಸದಾಗಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.