ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಹುದ್ದೆಗೆ ಚುನಾವಣೆಗಾಗಿ ಪ್ರಕಟಿಸಲಾಗಿದ್ದ ವೇಳಾಪಟ್ಟಿಯನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದೆ.
ಶಿವಮೊಗ್ಗ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ-ಎ (ಮಹಿಳೆ)ಗೆ ಮೀಸಲು ಕಲ್ಪಿಸಿ ನಗರಾಭಿವೃದ್ಧಿ ಇಲಾಖೆ ಆಗಸ್ಟ್ 24ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಪಾಲಿಕೆ ಸದಸ್ಯ ಡಿ ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿ ಕುರಿತು ಸೆಪ್ಟೆಂಬರ್ 3ರಂದು ಹೈಕೋರ್ಟ್ ಹೊರಡಿಸಿದ ಮಧ್ಯಂತರ ಆದೇಶವನ್ನು ಪರಿಗಣಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನದ ಆಯ್ಕೆಗೆ ಸೆಪ್ಟೆಂಬರ್ 13ರಂದು ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿ ಆಗಸ್ಟ್ 30ರಂದು ಹೊರಡಿಸಿದ್ದ ತಿಳಿವಳಿಕೆ ಪತ್ರವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಕುರಿತು ರಾಜ್ಯ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರು ಸೆಪ್ಟೆಂಬರ್ 5ರಂದು ಆದೇಶಿಸಿದ್ದಾರೆ ಎಂದು ವಿವರಿಸಿ ತಿಳಿವಳಿಕೆ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಅಲ್ಲದೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದನ್ನು ಪರಿಗಣಿಸಿದ ಪೀಠವು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಹುದ್ದೆಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಸೆಪ್ಟೆಂಬರ್ 3ರ ಮಧ್ಯಂತರ ಆದೇಶವನ್ನು ಸೆಪ್ಟೆಂಬರ್ 13ರವರೆಗೆ ವಿಸ್ತರಿಸಿ, ವಿಚಾರಣೆ ಮುಂಡೂಡಿತು. ಹಾಗೆಯೇ, ಮುಂದಿನ ವಿಚಾರಣೆಯೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಆಯ್ಕೆಗೆ 2018ರ ಸೆಪ್ಟೆಂಬರ್ 3ರಂದು ನಡೆದಿದ್ದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ವಾರ್ಡ್‌ನಿಂದ ಅರ್ಜಿದಾರ ಡಿ ನಾಗರಾಜ್ ಆಯ್ಕೆಯಾಗಿದ್ದರು. ಮಹಾನಗರ ಪಾಲಿಕೆ ಸದಸ್ಯರ ಅವಧಿ 2023ರ ಆಗಸ್ಟ್‌ಗೆ ಅಂತ್ಯವಾಗಲಿದೆ.
2022-23ನೇ ಸಾಲಿನ ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ-ಎ (ಮಹಿಳೆ)ಗೆ ಮೀಸಲು ಕಲ್ಪಿಸಿ ನಗರಾಭಿವೃದ್ಧಿ ಇಲಾಖೆ ಆಗಸ್ಟ್ 24ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಸೆಪ್ಟೆಂಬರ್ 13ರಂದು ಚುನಾವಣೆ ನಡೆಸಲು ಆಗಸ್ಟ್ 30ರಂದು ತಿಳುವಳಿಕೆ ಪತ್ರ ಹೊರಡಿಸಲಾಗಿತ್ತು. ಮೀಸಲು ಅಧಿಸೂಚನೆ ರದ್ದು ಕೋರಿ ಡಿ ನಾಗರಾಜ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಮೇಯರ್ ಹುದ್ದೆಯನ್ನು 2018ರಿಂದ 2023ರ ಅವಧಿಗೆ ಪರಿಶಿಷ್ಟ ಜಾತಿ (ಮಹಿಳೆ), ಸಾಮಾನ್ಯ ವರ್ಗ, ಹಿಂದುಳಿದ ವರ್ಗ-ಎ, ಹಿಂದುಳಿದ ವರ್ಗ (ಮಹಿಳೆ), ಹಿಂದುಳಿದ ವರ್ಗ-ಎ (ಮಹಿಳೆ)ಗೆ ಮೀಸಲು ಕಲ್ಪಿಸಲಾಗಿದೆ. ಆದರೆ, ಪರಿಶಿಷ್ಟ ಪಂಗಡಕ್ಕೆ ಮೀಸಲು ಕಲ್ಪಿಸಿಲ್ಲ. ಇದು ಎಂ ಅಬ್ದುಲ್ ಅಜೀಜ್ ಮತ್ತು ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ ಹೈಕೋರ್ಟ್ 2014ರಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಈ ವಾದ ಪರಿಗಣಿಸಿದ್ದ ಪೀಠವು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಹುದ್ದೆಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಿ ಸೆಪ್ಟೆಂಬರ್ 3ರಂದು ಮಧ್ಯಂತರ ಆದೇಶ ಮಾಡಿತ್ತು.