ದೆಹಲಿಯಲ್ಲಿ ಯಾಂತ್ರಿಕವಾಗಿ ಸಿಆರ್‌ಪಿಸಿ ಸೆಕ್ಷನ್ 144 ಬಳಕೆ: ಆಘಾತ ವ್ಯಕ್ತಪಡಿಸಿದ ನಿವೃತ್ತ ಸಿಜೆಐ ಯು ಯು ಲಲಿತ್

ತುರ್ತುಪರಿಸ್ಥಿತಿಗಳಲ್ಲಿ ಬಳಸಬೇಕಿದ್ದ ನಿಯಮಾವಳಿಗಳನ್ನು ದಾರ್ಷ್ಟ್ಯದ ರೀತಿಯಲ್ಲಿ ಬಳಸುವುದು ಕಾನೂನು ಆಳ್ವಿಕೆ ನಡೆಸುವ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ, ಅದು ತೊಂದರೆ ನೀಡುವಂಥದ್ದು ಎಂದಿದ್ದಾರೆ ಅವರು.
CJI UU Lalit
CJI UU Lalit

ಸಿಆರ್‌ಪಿಸಿ ಸೆಕ್ಷನ್‌ 144 ಅಡಿ ದೆಹಲಿಯಲ್ಲಿ ಯಾಂತ್ರಿಕವಾಗಿ ನಿಷೇಧಾಜ್ಞೆಗಳನ್ನು ಜಾರಿ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ತೀವ್ರ ಆಘಾತ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ' ಸಿಆರ್‌ಪಿಸಿ ಸೆಕ್ಷನ್ 144 ಬಳಕೆ ಮತ್ತು ದುರ್ಬಳಕೆ: ದೆಹಲಿಯಲ್ಲಿ 2021ರಲ್ಲಿ ಜಾರಿಗೊಳಿಸಿದ ಎಲ್ಲಾ ಆದೇಶಗಳ ಪ್ರಾಯೋಗಿಕ ವಿಶ್ಲೇಷಣೆ' ಹೆಸರಿನ ವರದಿಯ ಬಿಡುಗಡೆ ಹಿನ್ನೆಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.

ತುರ್ತುಪರಿಸ್ಥಿತಿಗಳಲ್ಲಿ ಬಳಸಬೇಕಿದ್ದ ನಿಯಮಾವಳಿಗಳನ್ನು ದಾರ್ಷ್ಟ್ಯದ ರೀತಿಯಲ್ಲಿ ಬಳಸುವುದು ಕಾನೂನು ಆಳ್ವಿಕೆ ನಡೆಸುವ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ ಮತ್ತು ಅದು ತೊಂದರೆ ನೀಡುವಂಥದ್ದು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತುರ್ತು ಸಂದರ್ಭಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಏಕಪಕ್ಷೀಯವಾಗಿ ನಿಷೇಧಾಜ್ಞೆಗಳನ್ನು ಜಾರಿ ಮಾಡುವ ಅಧಿಕಾರವನ್ನು ಸಿಆರ್‌ಪಿಸಿ ಸೆಕ್ಷನ್‌ 144 ದಂಡಾಧಿಕಾರಿಗೆ ನೀಡುತ್ತದೆ. ವಕೀಲರಾದ ಅಭಿನವ್‌ ಸೇಖ್ರಿ ಮತ್ತು ವೃಂದಾ ಭಂಡಾರಿ ಅವರು ಸಿದ್ಧಪಡಿಸಿರುವ ವರದಿಯಲ್ಲಿ ನಿರ್ಬಂಧಕಾಜ್ಞೆಗಳನ್ನು ಕೊರಿಯರ್‌ ಕಳಿಸುವವರ, ಸ್ವೀಕರಿಸುವವರ ಮಾಹಿತಿ ಸಂಗ್ರಹಕ್ಕೆ, ಸಿಸಿಟಿವಿಗಳನ್ನು ಕಡ್ಡಾಯಗೊಳಿಸುವುದಕ್ಕೆ ಹಾಗೂ ನಿರ್ದಿಷ್ಟ ಔಷಧಿಯ ಮಾರಾಟ ನಿಯಂತ್ರಿಸಲು ಕೂಡ ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದನ್ನು ವಿವರಿಸಲಾಗಿದೆ.

ನ್ಯಾ. ಲಲಿತ್‌ ಅವರ ಮಾತಿನ ಪ್ರಮುಖಾಂಶಗಳು

  • ಗುರಿಯೊಂದು ಸ್ವೀಕಾರಾರ್ಹವೆನಿಸಿದರೆ ಅದಕ್ಕಾಗಿ ಅಗತ್ಯವೆನಿಸುವ ಯಾವುದೇ ಹಾದಿಯನ್ನು ಬೇಕಾದರೂ ತುಳಿಯಬಹುದು ಎನ್ನುವುದನ್ನು ನಾವು ಕಾಣುತ್ತಿದ್ದೇವೆ. ಇದು ಕಾನೂನಾತ್ಮಕ ಅಡಳಿತದ ವ್ಯಾಪ್ತಿಯಲ್ಲಿ ಮಾಡುವಂತಹ ಕೆಲಸವಲ್ಲ. ಸೆಕ್ಷನ್‌ 144ನ್ನು ಈ ರೀತಿಯೂ ಬಳಸಬಹುದೆಂದು ನನಗೆ ಗೊತ್ತಿರಲಿಲ್ಲ.

  • ಕೊರಿಯರ್‌ನವರು ನಿಮ್ಮ ವಿವರಗಳನ್ನು ಬರೆದುಕೊಳ್ಳುವುದಕ್ಕೂ ಸೆಕ್ಷನ್ 144 ಬಳಸಬೇಕೆ? ಕಾರ್ಯಾಂಗ ಅಥವಾ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಒಂದು ವರ್ಷದಲ್ಲಿ ದೆಹಲಿಯಲ್ಲಿ 6,100 (ಪ್ರತಿಬಂಧಕಾಜ್ಞೆ) ಆದೇಶಗಳು! ಇದು ಆಘಾತ ಉಂಟು ಮಾಡುವಂಥದ್ದು. ತಮಗೆ ನೀಡಿದ ಅಧಿಕಾರವನ್ನು ನೀಡದ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತಿಲ್ಲ.

  • ಆಘಾತಕಾರಿ ಅಂಶಗಳನ್ನು ಬಿಚ್ಚಿಡುವ ವರದಿ ನನ್ನನ್ನು ಮತ್ತು ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ಕಣ್ತೆರೆಸುವಂತಿದೆ. ನಮ್ಮ ನಿತ್ಯದ ವ್ಯವಹಾರಗಳನ್ನು ಕಾನೂನು ಆಳ್ವಿಕೆಯೇ ನಿಯಂತ್ರಿಸಬೇಕು ಎಂಬುದು ನಮ್ಮ ಬಯಕೆ. ಕಾರ್ಯಾಂಗವು ಕಾನೂನಿನ ಪ್ರಕಾರ ಅಧಿಕಾರ ಚಲಾಯಿಸಬೇಕು.

  • ನಿಯಮಾವಳಿಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಲು ವರದಿ ಸ್ಫೂರ್ತಿ ನೀಡಲಿದೆ. ಅಲ್ಲದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವಾಗ ಸಕ್ಷಮ ನ್ಯಾಯಾಲಯದಲ್ಲಿ ಇತರೆ ಸಾಕ್ಷಿಗಳೊಂದಿಗೆ ಈ ವರದಿಯನ್ನು ಸಲ್ಲಿಸಬಹುದಾಗಿದೆ.  

  • ನಿತ್ಯದ ವ್ಯವಹಾರಗಳಿಗೆ ಕೂಡ ಸೆ. 144 ವಿಧಿಸಲಾಗುತ್ತಿದೆ ಎಂದು ಈ ಮೊದಲು ಯಾರಾದರೂ ನನಗೆ ಹೇಳಿದರೆ ನಗು ಬರುತಿತ್ತು. ಇದೇ ಮೊದಲ ಬಾರಿಗೆ ಅಂತಹದ್ದನ್ನು ನೋಡುತ್ತಿದ್ದೇನೆ. ಸೆಕ್ಷನ್‌ 144ನ್ನು ಉದ್ವಿಗ್ನ ಸಂದರ್ಭಗಳಲ್ಲಿ ತುರ್ತು ಅಧಿಕಾರವಾಗಿ ಜಿಲ್ಲಾಧಿಕಾರಿ, ಅಥವಾ ಪೊಲೀಸ್‌ ಅಧಿಕಾರಿಗಳು ಬಳಸುತ್ತಾರೆ ಎಂಬುದು ಕಾನೂನು ವಿದ್ಯಾರ್ಥಿಯಾಗಿ ನಾನು ಬಲ್ಲ ವಿಚಾರವಾಗಿತ್ತು.

  • ಶಾಂತಿಯುತ ಪ್ರತಿಭಟನೆ ಖಂಡಿತವಾಗಿ ಸಾಂವಿಧಾನಿಕ ಹಕ್ಕು. ತುರ್ತು ಪರಿಸ್ಥಿತಿಗೆ ಬಳಸುವ ಸೆ. 144ನ್ನು ಬೇರೆ ಉದ್ದೇಶಗಳಿಗೆ ಹೇಗೆ ಬಳಸಲು ಸಾಧ್ಯ?

  • ಸಾಮೂಹಿಕ ಕಣ್ಗಾವಲು ಅಸ್ತ್ರವಾಗಿ ಈ ಸೆಕ್ಷನ್‌ ದುರುಪಯೋಗವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ . ಆದರೆ ಕೆಲವು ಕ್ಷೇತ್ರಗಳಲ್ಲಿ ಅದನ್ನು ಖಂಡಿತವಾಗಿಯೂ ಬಳಸಬಾರದು. ಅದನ್ನು ಕಣ್ಗಾವಲು ಇಡುವುದಕ್ಕಾಗಿ ಬಳಸುವುದಂತೂ ಅತಿರೇಕದ ವಿಚಾರವಾಗುತ್ತದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ರೆಬೆಕಾ ಜಾನ್‌ ಕೂಡ ಇದಕ್ಕೆ ದನಿಗೂಡಿಸಿದರು. ಸೆಕ್ಷನ್ 144ನ್ನು ಇಷ್ಟು 'ಸೃಜನಾತ್ಮಕವಾಗಿ' ಬಳಸಬಹುದು ಎಂದು ನನ್ನ ಕಲ್ಪನೆಗೂ ನಿಲುಕಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com