ವಕೀಲರು, ಪ್ರಾಧ್ಯಾಪಕರ ಮನೆ ಧ್ವಂಸ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ರಾಜ್ಯ ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಕಟ್ಟಡ ನೆಲಸಮ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಸೂಕ್ತ ಸಮಯಾವಕಾಶ ಕಲ್ಪಿಸಲಾಗಿತ್ತು ಎಂದರು.
Supreme Court , UP and demolitions
Supreme Court , UP and demolitions
Published on

ಕಾನೂನಾತ್ಮಕ ವಿಧಾನ ಅನುಸರಿಸದೆಯೇ ಪ್ರಯಾಗ್‌ರಾಜ್‌ನಲ್ಲಿ ವಕೀಲರು, ಪ್ರಾಧ್ಯಾಪಕರು ಹಾಗೂ ಉಳಿದ ಮೂವರ ಮನೆ ನೆಲಸಮಗೊಳಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ.

ನೆಲಸಮ ಕಾರ್ಯಾಚರಣೆ ಆಘಾತಕಾರಿಯಾಗಿದ್ದು ತಪ್ಪು ಸಂದೇಶ ನೀಡುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಸರ್ಕಾರಕ್ಕೆ ಛೀಮಾರಿ ಹಾಕಿತು. 

Also Read
ಬುಲ್ಡೋಜರ್ ನ್ಯಾಯ ಅಸಾಂವಿಧಾನಿಕ ಎಂದು ಸುಪ್ರೀಂ ಮಹತ್ವದ ತೀರ್ಪು: ಅಧಿಕಾರಿಗಳಿಗೆ ದಂಡ ವಿಧಿಸುವ ಮಾರ್ಗಸೂಚಿ ಬಿಡುಗಡೆ

ಸಂಬಂಧಪಟ್ಟ ವ್ಯಕ್ತಿಗಳ ಆಸ್ತಿಗೆ ತೆರವು ಕಾರ್ಯಾಚರಣೆಯ ನೋಟಿಸ್‌ ಅಂಟಿಸುವುದಕ್ಕೆ ನಿಜಕ್ಕೂ ಒಂದು ಕಾರಣವಿತ್ತು ಎಂದು ಸರ್ಕಾರದ ಪರ ವಕೀಲರು ವಾದಿಸಿದಾಗ ಅಂತಹ ಅತಿ ತಾಂತ್ರಿಕತೆಯ ಕಾರಣಗಳನ್ನು ಹೇಗೆ ಎದುರಿಸಬೇಕು ಎಂದು ನನಗೆ ತಿಳಿದಿದೆ ಎಂದು ಪೀಠ ಕೆಂಡಾಮಂಡಲವಾಯಿತು.

"ನೀವು ಮನೆಗಳನ್ನು ಕೆಡವುವ ಕಠಿಣ ಕ್ರಮ ಕೈಗೊಳ್ಳುತ್ತಿದ್ದೀರಿ. ಹಾಗೆ ಕಟ್ಟಡ ಕಳೆದುಕೊಂಡವರಲ್ಲಿ ಒಬ್ಬ ವಕೀಲ, ಓರ್ವ ಪ್ರಾಧ್ಯಾಪಕ ಕೂಡ ಇದ್ದಾರೆ. ಇಂತಹ ಅತಿ ತಾಂತ್ರಿಕತೆಯ ವಾದಗಳನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ. ಎಲ್ಲಕ್ಕೂ ಮಿಗಿಲಾಗಿ 21ನೇ ವಿಧಿ ಹಾಗೂ ಆಶ್ರಯ ಪಡೆಯುವ ಹಕ್ಕು ಎಂಬುದೊಂದು ಇದೆ!” ಎಂದು   ನ್ಯಾ. ಓಕಾ ಗುಡುಗಿದರು.

ಸರ್ಕಾರ ಅರ್ಜಿದಾರರ ಭೂಮಿಯನ್ನು 2023ರಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಪಾತಕಿ-ರಾಜಕಾರಣಿ ಅತೀಕ್ ಅಹ್ಮದ್ ಅವರಿಗೆ ಸೇರಿದ ಭೂಮಿ ಎಂದು ತಪ್ಪಾಗಿ ಭಾವಿಸಿ ಧ್ವಂಸ ಮಾಡಿದೆ ಎಂಬುದಾಗಿ ಅರ್ಜಿದಾರರ ಪರ ಹಿರಿಯ ವಕೀಲ ಅಭಿಮನ್ಯು ಭಂಡಾರಿ ವಾದ ಮಂಡಿಸಿದರು.

ಆದರೆ ರಾಜ್ಯ ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಅಟಾರ್ನಿ ಜನರಲ್  ಆರ್ ವೆಂಕಟರಮಣಿ  ಅವರು ಕಟ್ಟಡ ನೆಲಸಮ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಸೂಕ್ತ ಸಮಯಾವಕಾಶ ಕಲ್ಪಿಸಲಾಗಿತ್ತು ಎಂದರು.

ಈ ವಾದ ಒಪ್ಪದ ನ್ಯಾ. ಓಕಾ "ಈ ರೀತಿ ನೋಟಿಸ್ ಏಕೆ ಅಂಟಿಸಲಾಗಿದೆ? ಕೊರಿಯರ್ ಮೂಲಕ ಏಕೆ ಕಳುಹಿಸಬಾರದು? ಈ ರೀತಿಯಾದರೆ ಯಾರು ಬೇಕಾದರೂ ನೋಟಿಸ್ ನೀಡಿ ಧ್ವಂಸ ಮಾಡಿಬಿಡಬಹುದು... ಇದು ಉದ್ಧಟತನದ ಧ್ವಂಸ ಪ್ರಕರಣ, ಅಷ್ಟೆ" ಎಂದು ಅವರು ಹೇಳಿದರು.

Also Read
ಅತೀಕ್ ಅಹಮದ್‌ ಹತ್ಯೆ: ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

ನೋಟಿಸ್ ತಲುಪಿಸುವಾಗ ಆ ವ್ಯಕ್ತಿ ಅಲ್ಲಿದ್ದಾರೋ ಇಲ್ಲವೋ ಎಂಬುದು ವಿವಾದಾತ್ಮಕ ಸಂಗತಿಯಾಗಿದೆ ಎಂದು ಅಟಾರ್ನಿ ಜನರಲ್‌ ಹೇಳಿದರು. "ನಾನು ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸುತ್ತಿಲ್ಲ, ಆದರೆ (ಅಲಾಹಾಬಾದ್) ಹೈಕೋರ್ಟ್ ಈ ವಿಚಾರ ಪರಿಗಣಿಸಲಿ" ಎಂದು ಎಜಿ ಹೇಳಿದರು. ಆದರೆ ಇದನ್ನು ಮನ್ನಿಸದ ನ್ಯಾಯಾಲಯ ಪ್ರಕರಣ ಇನ್ನಷ್ಟು ವಿಳಂಬವಾಗುತ್ತದೆ ಎಂದಿತು. ಅಲ್ಲದೆ ತೆರವುಗೊಳಿಸಿರುವ ಕಟ್ಟಡಗಳನ್ನು ಮತ್ತೆ ನಿರ್ಮಿಸಿಕೊಡಬೇಕು ಎಂದಿತು.

 "ಈ ಕಟ್ಟಡಗಳನ್ನು ಪುನರ್ನಿರ್ಮಿಸಬೇಕಾಗುತ್ತದೆ. ನೀವು ಅಫಿಡವಿಟ್ ಸಲ್ಲಿಸುವ ಮೂಲಕ ಪ್ರಶ್ನಿಸಲು ಬಯಸಿದರೆ ಸರಿ, ಇಲ್ಲದಿದ್ದರೆ ಇನ್ನೊಂದು ಕಡಿಮೆ ಮುಜುಗರದ ಮಾರ್ಗವೆಂದರೆ ಅವರಿಗೆ ಕಟ್ಟಡ ನಿರ್ಮಿಸಲು ಅವಕಾಶ ನೀಡಿ ನಂತರ ಕಾನೂನಿನ ಪ್ರಕಾರ ಅವರಿಗೆ ನೋಟಿಸ್ ನೀಡುವುದು" ಎಂದು ಸುಪ್ರೀಂ ಕೋರ್ಟ್ ಹೇಳಿತು. ವಕೀಲೆ ರೋಹಿಣಿ ದುವಾ ಅವರ ಮೂಲಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. 

Kannada Bar & Bench
kannada.barandbench.com