ತಲಾಖ್-ಎ- ಹಸನ್ ರದ್ದುಗೊಳಿಸುವ ಇಂಗಿತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ಪ್ರಕರಣವನ್ನು ಐವರು ಸದಸ್ಯರ ಪೀಠಕ್ಕೆ ವರ್ಗಾಯಿಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಸೂಚಿಸಿತು.
Muslim Woman (representative image)
Muslim Woman (representative image)
Published on

ಮುಸ್ಲಿಂ ಪುರುಷ ತನ್ನ ಹೆಂಡತಿಗೆ ತಿಂಗಳಿಗೊಮ್ಮೆಯಂತೆ ಮೂರು ತಿಂಗಳು "ತಲಾಖ್" ಎಂದು ಹೇಳಿ ವಿಚ್ಛೇದನ ಪಡೆಯುವ ತಲಾಖ್-ಎ-ಹಸನ್  ಪದ್ಧತಿ ರದ್ದುಗೊಳಿಸುವ ಬಗ್ಗೆ ತಾನು ಪರಿಗಣಿಸುವ ಸಾಧ್ಯತೆ ಇದೆ ಎಂಬುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ [ಬೆನಜೀರ್ ಹೀನಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪ್ರಕರಣವನ್ನು ಐವರು ಸದಸ್ಯರ ಪೀಠಕ್ಕೆ ವರ್ಗಾಯಿಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಸೂಚಿಸಿತು. ಈ ಸಂಬಂಧ ಏಳುವ ಪ್ರಶ್ನೆಗಳನ್ನು ಟಿಪ್ಪಣಿ ಮಾಡಿ ಸಲ್ಲಿಸುವಂತೆ ಸಂಬಂಧಪಟ್ಟ ಕಕ್ಷಿದಾರರಿಗೆ ಅದು ಸೂಚಿಸಿತು.

Also Read
ತಲಾಖ್-ಎ-ಹಸನ್‌ ಮೇಲ್ನೋಟಕ್ಕೆ ಅನುಚಿತವಲ್ಲ, ಪ್ರಕರಣವನ್ನು ಬೇರೆ ಕಾರ್ಯಸೂಚಿಗೆ ಬಳಸಿಕೊಳ್ಳಬಾರದು: ಸುಪ್ರೀಂ ಕೋರ್ಟ್‌

ಈ ಪದ್ಧತಿಯು ಒಟ್ಟಾರೆಯಾಗಿ ಸಮಾಜದ ಮೇಲೆ ಪರಿಣಾಮ ಬೀರುವುದರಿಂದ, ತಾನು ಪರಿಹಾರ ಕ್ರಮ ಕೈಗೊಳ್ಳಬೇಕಾಗಬಹುದು. ತೀವ್ರ ತಾರತಮ್ಯ ಇದ್ದರೆ ನ್ಯಾಯಾಲಯ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ಮಹಿಳೆಯರ ಘನತೆಯ ಮೇಲೆ ಪರಿಣಾಮ ಬೀರುವ ಇಂತಹ ಪದ್ಧತಿಯನ್ನು ನಾಗರಿಕ ಸಮಾಜ ಹೇಗೆ ಮುಂದುವರೆಸಲು ಸಾಧ್ಯ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

"ಇಂತಹ ಪದ್ಧತಿಯನ್ನು 2025ರಲ್ಲೂ ಮುಂದುವರೆಸಬಹುದೇ?" ಇದು ನಾಗರಿಕ ಸಮಾಜ ಒಪ್ಪುವಂತಹದ್ದೇ ಎಂದು ನ್ಯಾ. ಕಾಂತ್‌ ಕೇಳಿದರು.

ತಲಾಖ್‌-ಎ-ಹಸನ್ ಪದ್ದತಿ ಅತಾರ್ಕಿಕ, ಅವಾಸ್ತವಿಕ ಹಾಗೂ ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದ್ದು ಇದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಎಂದು ಕೋರಿ ಪತ್ರಕರ್ತೆ ಬೆನಜೀರ್ ಹೀನಾ ಅವರು 2022ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು.

ವಿಚ್ಛೇದನ ನೀಡುವಾಗ ಲಿಂಗ ಮತ್ತು ಧರ್ಮದ ತಟಸ್ಥ ಕಾರ್ಯವಿಧಾನ ಅನುಸರಿಸಬೇಕು ಮತ್ತು ವಿಚ್ಛೇದನಕ್ಕೆ ಇರುವ ಆಧಾರ ಕುರಿತು ಮಾರ್ಗಸೂಚಿಗಳನ್ನು ನೀಡಬೇಕು ಎಂದು ಕೂಡ ಕೋರಲಾಗಿತ್ತು.

Also Read
ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ತಲಾಖ್-ಎ-ಹಸನ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ

ವಾದದ ಒಂದು ಹಂತದಲ್ಲಿ ನ್ಯಾಯಾಲಯ “ನೀವು ಪತ್ರಕರ್ತೆ; ಅದಕ್ಕಾಗಿ ನಿಮ್ಮ ಧ್ವನಿ ಕೇಳಿಸುತ್ತದೆ. ದೂರದ ಪ್ರದೇಶಗಳಲ್ಲಿ ಉಳಿದಿರುವ ಮಹಿಳೆಯರ ಧ್ವನಿ ಯಾರು ಕೇಳುತ್ತಾರೆ?” ಎಂದಿತು.

ಕುತೂಹಲದ ಸಂಗತಿ ಎಂದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾಖ್-ಎ-ಹಸನ್‌ ಮೇಲ್ನೋಟಕ್ಕೆ ಅನುಚಿತವಲ್ಲ, ಪ್ರಕರಣವನ್ನು ಬೇರೆ ಕಾರ್ಯಸೂಚಿಗೆ ಬಳಸಿಕೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಹೇಳಿದ್ದನ್ನು ಇಲ್ಲಿ ನೆನೆಯಬಹುದು.

Kannada Bar & Bench
kannada.barandbench.com