ಮತಾಂತರಗೊಳ್ಳುವ ದಲಿತರಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಕೋರಿ ಮನವಿ: ಬಾಲಕೃಷ್ಣನ್ ಆಯೋಗದ ವರದಿಯತ್ತ ಸುಪ್ರೀಂ ಚಿತ್ತ

ಈ ವಿಚಾರವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ನೇತೃತ್ವದಲ್ಲಿ ಹೊಸ ಆಯೋಗ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
Justices SK Kaul, AS Oka, Vikram Nath with Supreme Court
Justices SK Kaul, AS Oka, Vikram Nath with Supreme Court

ಕೇಂದ್ರ ಸರ್ಕಾರ ರಚಿಸಿರುವ ನೂತನ ವಿಚಾರಣಾ ಆಯೋಗದ ವರದಿ ಸಲ್ಲಿಕೆಯಾಗುವವರೆಗೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿಯ ಪ್ರಯೋಜನಗಳನ್ನು ವಿಸ್ತರಿಸಬೇಕೇ ಎಂಬುದರ ಕುರಿತು ತೀರ್ಪು ನೀಡುವುದನ್ನು ತಡೆ ಹಿಡಿಯಬೇಕೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಚಿಂತನೆ ನಡೆಸಿತು [ಸಿಪಿಐಎಲ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ದಲಿತ ವ್ಯಕ್ತಿಗಳಿಗೂ ಸಹ ಮೀಸಲಾತಿ ಪ್ರಯೋಜನಗಳನ್ನು ವಿಸ್ತರಿಸಲು ಕೋರಿ 2004ರಲ್ಲಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್, ಅಭಯ್ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ನಡೆಸಿತು.

ಈಗ ಪ್ರಶ್ನಿಸಲಾಗಿರುವ ನ್ಯಾ. ರಂಗನಾಥ್ ಮಿಶ್ರಾ ಆಯೋಗದ ವರದಿ ದಲಿತ ಹಿಂದೂಗಳಂತೆಯೇ ಇತರ ಧರ್ಮದಲ್ಲಿಯೂ ದಲಿತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿತ್ತು ಎಂಬುದಾಗಿ ಮನವಿಯಲ್ಲಿ ವಿವರಿಸಲಾಗಿತ್ತು.

ಬುಧವಾರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ "ಕೇಂದ್ರ ಸರ್ಕಾರ ಆಯೋಗದ ವರದಿ ಅಂಗೀಕರಿಸದಿರಲು ನಿರ್ಧರಿಸಿದ್ದು ಅದರ ಬದಲು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್‌ ನೇತೃತ್ವದಲ್ಲಿ ಹೊಸ ಆಯೋಗ ರಚಿಸಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Also Read
ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸೌಲಭ್ಯ ಕಲ್ಪಿಸುವುದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಿರೋಧ

ಆದರೆ ಸಿಪಿಐಎಲ್ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಹೊಸ ಆಯೋಗದ ವಿಚಾರಣೆ ಮುಗಿಯುವ ಹೊತ್ತಿಗೆ 18 ವರ್ಷಗಳಷ್ಟು ಹಳೆಯ ಪ್ರಕರಣ ಇನ್ನಷ್ಟು ವಿಳಂಬವಾಗುತ್ತದೆ. ವರದಿ ಬರಲು ಇನ್ನೂ ಎರಡು ವರ್ಷಗಳಷ್ಟು ಅವಧಿ ಹಿಡಿಯಬಹುದು ಎಂದರು.

ಅರ್ಜಿಯ ವಿಚಾರಣಾರ್ಹತೆ ನಿರ್ಧರಿಸುವುದಕ್ಕೂ ಮೊದಲು,  ಜನವರಿ 2023ರಲ್ಲಿ ನಿಗದಿಯಾಗಿರುವ ಮುಂದಿನ ವಿಚಾರಣೆ ಸಂದರ್ಭದಲ್ಲಿ ಪ್ರಸ್ತುತ ಸಲ್ಲಿಕೆಯಾಗಿರುವ ದಾಖಲೆಗಳಿಂದ ಮಾತ್ರವೇ  ಮನವಿಯನ್ನು ಪರಿಗಣಿಸಬಹುದೇ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಪೀಠ ನುಡಿಯಿತು.  

ಈ ಹಿಂದೆ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ  ಕೋರಿತ್ತು, ಅದರಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಿಪಿಐಎಲ್‌ ಮನವಿಯನ್ನು ವಿರೋಧಿಸಿ ಅಫಿಡವಿಟ್ ಸಲ್ಲಿಸಿತ್ತು.

ಹಿಂದೂ ಸಮಾಜದಲ್ಲಿ ನೂರಾರು ವರ್ಷಗಳಿಂದ ಇದ್ದ ದಬ್ಬಾಳಿಕೆಯ ವಾತಾವರಣ ಕ್ರೈಸ್ತ ಅಥವಾ ಮುಸ್ಲಿಂ ಧರ್ಮದಲ್ಲಿಯೂ ಅಸ್ತಿತ್ವದಲ್ಲಿದೆ ಎನ್ನುವುದಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲ ಎಂದು ಅಫಿಡವಿಟ್‌ ಹೇಳಿತ್ತು.

Related Stories

No stories found.
Kannada Bar & Bench
kannada.barandbench.com