ದೇಶದ ಜನಸಂಖ್ಯೆಯ ಆಧಾರದ ಮೇಲೆ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ನಿಗದಿಪಡಿಸುವ ಬದಲು ರಾಜ್ಯದ ಜನಸಂಖ್ಯೆ ಆಧಾರದ ಮೇಲೆ ಅದನ್ನು ನಿರ್ಧರಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಕುತೂಹಲಕಾರಿ ಸಂಗತಿ ಎಂದರೆ ಅಲ್ಪಸಂಖ್ಯಾತರನ್ನು ಗುರುತಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕೆಂದು ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಅರ್ಜಿ ಕೋರಿದ್ದರೂ ಸಹ ಬಿಜೆಪಿ ಆಡಳಿತವಿರುವ ಮೂರು ರಾಜ್ಯಗಳು (ಅಸ್ಸಾಂ, ಮಣಿಪುರ ಹಾಗೂ ಉತ್ತರಾಖಂಡ) ಮಾತ್ರ ರಾಜ್ಯ ಸರ್ಕಾರಗಳಿಗೆ ಆ ಅಧಿಕಾರ ದೊರೆಯಲಿ ಎಂದಿವೆ. ಕರ್ನಾಟಕವೂ ಸೇರಿದಂತೆ ಉಳಿದೆಲ್ಲಾ ಬಿಜೆಪಿ ಆಡಳಿತವಿರುವ ರಾಜ್ಯಗಳು ರಾಷ್ಟ್ರಮಟ್ಟದ ನಿರ್ಣಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವುದನ್ನು ಬೆಂಬಲಿಸಿವೆ.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಕಾಯಿದೆ- 2004ರ ಸೆಕ್ಷನ್ 2 (ಎಫ್) ಅನ್ನು ಅರ್ಜಿ ಪ್ರಶ್ನಿಸಿತ್ತು. ಕಾಯಿದೆಯ ಉದ್ದೇಶಕ್ಕಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಕೇಂದ್ರ ಸರ್ಕಾರ ಗುರುತಿಸಬೇಕು ಎಂದು ನಿಯಮಾವಳಿ ಹೇಳುತ್ತದೆ.
ಈ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 24 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡಲಾಗಿದೆ.
ರಾಷ್ಟ್ರೀಯ ಜನಸಂಖ್ಯೆಯ ಆಧಾರದ ಮೇಲೆ ಅಲ್ಪಸಂಖ್ಯಾತರ ಸ್ಥಾನಮಾನ ಗುರುತಿಸುವ ಅಧಿಕಾರ ಕೇಂದ್ರ ಸರ್ಕಾರದಲ್ಲೇ ಮುಂದುವರೆಯಲಿ ಎಂದು ಯಥಾಸ್ಥಿತಿಗೆ ಸಹಮತಿಸಿ 30ರಲ್ಲಿ16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಿಳಿಸಿವೆ. 8 ಸರ್ಕಾರಗಳು ಈ ಅಧಿಕಾರ ರಾಜ್ಯ ಸರ್ಕಾರಗಳಿಗೆ ದೊರೆಯಬೇಕು ಎಂದಿವೆ. ಆದರೆ 6 ಸರ್ಕಾರಗಳು ಪ್ರತ್ಯೇಕ ನಿಲುವು ತಳೆದಿವೆ. ಉಳಿದಂತೆ ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಲಕ್ಷದ್ವೀಪ, ರಾಜಸ್ಥಾನ ಹಾಗೂ ತೆಲಂಗಾಣ ಸೇರಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.