ಕೊಲಿಜಿಯಂ ಸೂಚಿಸಿದ ನ್ಯಾಯಮೂರ್ತಿಗಳ ನೇಮಕ ಏಕೆ ಬಾಕಿ ಇದೆ ಎಂಬುದನ್ನು ಹೇಳಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಜಾರ್ಖಂಡ್ ಹೈಕೋರ್ಟ್‌ ಸಿಜೆ ಹುದ್ದೆಗೆ ನ್ಯಾ. ಎಂ ಎಸ್ ರಾಮಚಂದ್ರ ರಾವ್ ಅವರ ನೇಮಕಾತಿ ಅಂಗೀಕರಿಸದ ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿ ಜಾರ್ಖಂಡ್ ಸರ್ಕಾರ ಅರ್ಜಿ ಸಲ್ಲಿಸಿತ್ತು.
Supreme Court collegium
Supreme Court collegium
Published on

ನ್ಯಾಯಮೂರ್ತಿಗಳ ಹುದ್ದೆಗೆ ಕೊಲಿಜಿಯಂ ಪುನರುಚ್ಚರಿಸಿದ್ದ ಹೆಸರುಗಳ ಪಟ್ಟಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ತಾಕೀತು ಮಾಡಿರುವ ಸುಪ್ರೀಂ ಕೋರ್ಟ್‌ ಆ ಹೆಸರುಗಳನ್ನು ಏಕೆ ಇನ್ನೂ ಅಂಗೀಕರಿಸಿಲ್ಲ ಎಂಬುದನ್ನು ವಿವರಿಸುವಂತೆಯೂ ಸೂಚಿಸಿದೆ.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿರುವ ಪೀಠ ಎರಡು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದ್ದು ಮೊದಲನೆಯದು ನ್ಯಾ. ಎಂ ಎಸ್ ರಾಮಚಂದ್ರ ರಾವ್ ಅವರನ್ನು ಜಾರ್ಖಂಡ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಮಾಡಿದ ಶಿಫಾರಸನ್ನು ಅಂಗೀಕರಿಸದ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿ ಜಾರ್ಖಂಡ್ ಸರ್ಕಾರ ಮಾಡಿದ ಮನವಿಯಾಗಿದೆ.

Also Read
ಹೈಕೋರ್ಟ್ ಸಿಜೆ ನೇಮಕಾತಿಯಲ್ಲಿ ಕೇಂದ್ರದ ವಿಳಂಬ ಧೋರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಜಾರ್ಖಂಡ್ ಸರ್ಕಾರ

ವಕೀಲ ಹರ್ಷ್ ವಿಭೋರ್ ಸಿಂಗಲ್ ಅವರು ಸಲ್ಲಿಸಿದ ಇನ್ನೊಂದು ಅರ್ಜಿ  ಕೊಲಿಜಿಯಂ ನಿರ್ಣಯಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಅಂಗೀಕರಿಸಲು ನಿಗದಿತ ಗಡುವು ವಿಧಿಸುವಂತೆ ಕೋರುತ್ತದೆ.

ಇಂದು ಪ್ರಕರಣದ ವಿಚಾರಣೆ ನಡೆದಾಗ ಸಿಂಗಲ್‌ ಅವರು “ಶಿಫಾರಸು ಮುಂದೂಡುವುದರಿಂದ ಕೇಂದ್ರಕ್ಕೆ ಏನು ಸಿಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಸಮಸ್ಯೆ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಇಲ್ಲ ಬದಲಿಗೆ…” ಎಂದರು.  

ಕೆಲ ನೇಮಕಾತಿ ತೆರವುಗೊಳ್ಳುತ್ತಿರುವುದರಿಂದ ಪ್ರಕರಣ ಮುಂದೂಡಲು ಬಯಸುವುದಾಗಿ ನ್ಯಾಯಾಲಯ ತಿಳಿಸಿತು. ಆಗ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌ "ಸೌರಭ್ ಕಿರ್ಪಾಲ್ ಮುಂತಾದವರ ಹೆಸರುಗಳನ್ನು ಅಂಗೀಕರಿಸದ ಪ್ರಕರಣಗಳಿವೆ. ಕೊಲಿಜಿಯಂ ಶಿಫಾರಸುಗಳ ಬಗ್ಗೆ ವರ್ಷಗಳ ಕಾಲ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿರುವ ಅನೇಕ ನಿದರ್ಶನಗಳಿವೆ" ಎಂದರು.

Also Read
ತನಗೆ ಬೇಕಾದವರನ್ನು ಕೊಲಿಜಿಯಂ ಒಪ್ಪಲಿಲ್ಲವೆಂದು ಕೇಂದ್ರವು ನ್ಯಾಯಮೂರ್ತಿಗಳ ಪದೋನ್ನತಿ ನಿರ್ಬಂಧಿಸುವಂತಿಲ್ಲ: ಸುಪ್ರೀಂ

ಆಗ ಎಜಿ ಆರ್‌ ವೆಂಕಟರಮಣಿ ಅವರನ್ನು ಉದ್ದೇಶಿಸಿ ಸಿಜೆಐ ಚಂದ್ರಚೂಡ್‌ ಅವರು ನ್ಯಾಯಾಲಯ ಪುನರುಚ್ಚರಿಸಿದ ನ್ಯಾಯಮೂರ್ತಿಗಳ ಪಟ್ಟಿ ತಯಾರಿಸಿ ಅವರ ನೇಮಕಾತಿ ಏಕೆ ಬಾಕಿ ಉಳಿದಿದೆ ಎಂಬುದನ್ನು ತಿಳಿಸುವಂತೆ ಸೂಚಿಸಿದರು.

ಜಾರ್ಖಂಡ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ನ್ಯಾ. ಬಿ ಆರ್‌ ಸಾರಂಗಿ ಅವರ ಹೆಸರನ್ನು ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಡಿಸೆಂಬರ್ 2023ರಲ್ಲಿ ಶಿಫಾರಸು ಮಾಡಲಾಗಿತ್ತು. ಆದರೂ ಅವರು 6 ತಿಂಗಳವರೆಗೆ ಹುದ್ದೆ ಅಲಂಕರಿಸಲು ಸಾಧ್ಯವಾಗಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎ ಜಿ "ಇಂತಹ ಹೆಸರುಗಳು ಬಾಕಿ ಉಳಿದಿರುವುದಕ್ಕೆ ಹಲವಾರು ಕಾರಣಗಳಿವೆ ಮತ್ತು ನಮಗೆ ಯಾವುದೇ ಹಿಂಜರಿಕೆಯಿಲ್ಲ ... ನ್ಯಾಯಾಲಯಕ್ಕೆ ಬಂದು (ಅರ್ಜಿದಾರರು) ಇದೆಲ್ಲವನ್ನೂ ಹೇಳುವುದು ತುಂಬಾ ಸುಲಭ..." ಎಂದರು. ಈ ಹಂತದಲ್ಲಿ ನ್ಯಾಯಾಲಯ ಪ್ರಕರಣ ಮುಂದೂಡಿತು.

Kannada Bar & Bench
kannada.barandbench.com