ತನ್ನ ಲಿವ್ – ಇನ್ ಸಂಗಾತಿ ಶ್ರದ್ಧಾ ವಾಕರ್‌ಳನ್ನು ಬರ್ಬರವಾಗಿ ಕೊಂದ ಆರೋಪ ಎದುರಿಸುತ್ತಿರುವ ಅಫ್ತಾಬ್ ಅಮೀನ್ ಪೂನಾವಾಲಾನ ಪೊಲೀಸ್ ಕಸ್ಟಡಿ ಅವಧಿಯನ್ನು ಮಂಗಳವಾರ ನಾಲ್ಕು ದಿನಗಳ ಕಾಲ ವಿಸ್ತರಿಸಿ ದೆಹಲಿಯ ಸಾಕೇತ್ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆ ನ್ಯಾಯಾಧೀಶ ಅವಿರಳ್ ಶುಕ್ಲಾ ಅವರು ಪೊಲೀಸ್ ಕಸ್ಟಡಿ ಅವಧಿ ವಿಸ್ತರಿಸಿದರು. ಈ ವೇಳೆ ತಾನು ಆವೇಗ, ಆಕ್ರೋಶದಲ್ಲಿ ಶ್ರದ್ಧಾಳನ್ನು ಕೊಲೆ ಮಾಡಿದ್ದಾಗಿ ಅಫ್ತಾಬ್ ತಿಳಿಸಿದ್ದಾನೆ.
ಕೃತ್ಯ ತಿಂಗಳುಗಳ ಹಿಂದೆ ನಡೆದಿರುವುದರಿಂದ, ಅಫ್ತಾಬ್‌ಗೆ ಸ್ಪಷ್ಟವಾಗಿ ಘಟನಾವಳಿಗಳ ವಿವರ ನೀಡಲಾಗುತ್ತಿಲ್ಲ. ಹೀಗಾಗಿ ಆತನ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಉಂಟಾಗಿವೆ ಎಂದು ನ್ಯಾಯಾಲಯದೆದುರು ಆತನ ವಕೀಲರು ವಾದಿಸಿದರು. ಕಳೆದ ವಾರ, ಅಫ್ತಾಬ್‌ಗೆ ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿತ್ತು.
ಬಂಬಲ್ ಡೇಟಿಂಗ್ ಅಪ್ಲಿಕೇಷನ್ ಮೂಲಕ ಭೇಟಿಯಾದ ಅಫ್ತಾಬ್- ಶ್ರದ್ಧಾ ಜೋಡಿ ಸಹ ಜೀವನ (ಲಿವ್ ಇನ್) ನಡೆಸುತ್ತಿತ್ತು. ಮೂಲತಃ ಮುಂಬೈ ನಿವಾಸಿಗಳಾಗಿದ್ದ ಈ ಜೋಡಿ ಇದೇ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಪೊಲೀಸರ ಪ್ರಕಾರ, ಈ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್‌ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ.