ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಲ್ಕರ್ ಅವರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಜೈಲಿನ ನಿಯಮಗಳ ಪ್ರಕಾರ ಹಗಲು ಹೊತ್ತಿನಲ್ಲಿ ದಿನಕ್ಕೆ ಎಂಟು ಗಂಟೆ ಕಾಲ ಏಕಾಂತ ಬಂಧನದಿಂದ ಬಿಡುಗಡೆ ಮಾಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಪೂನವಾಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಗಿರೀಶ್ ಕತ್ಪಾಲಿಯಾ ಈ ಆದೇಶ ನೀಡಿದ್ದಾರೆ.
ಪೂನಾವಾಲಾಗೆ ಬೆದರಿಕೆ ಇರುವುದನ್ನು ಪರಿಗಣಿಸಿ, ಅವರನ್ನು ರಾತ್ರಿ ಹೊತ್ತು ಮತ್ತೆ ಏಕಾಂತ ಸೆರೆವಾಸಕ್ಕೆ ಕಳುಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಜೀವ ಬೆದರಿಕೆಯಿಂದ ರಕ್ಷಿಸುವ ಸೋಗಿನಲ್ಲಿ ಜೈಲು ಅಧಿಕಾರಿಗಳು ತನ್ನನ್ನು 22 ಗಂಟೆ ಕಾಲ ಏಕಾಂತ ಬಂಧನದಲ್ಲಿರಿಸುತ್ತಿದ್ದಾರೆ. ಇದೇ ರೀತಿಯ ಶಿಕ್ಷೆಗೆ ಗುರಿಯಾಗಿರುವ ಉಳಿದ ಕೈದಿಗಳನ್ನು ದಿನಕ್ಕೆ ಎಂಟು ಗಂಟೆ ಕಾಲ ಏಕಾಂತ ಸೆರೆವಾಸದಿಂದ ಮುಕ್ತಗೊಳಿಸುತ್ತಿದ್ದರೂ ತನ್ನನ್ನು ಬೆಳಿಗ್ಗೆ ಒಂದು ಗಂಟೆ ಮತ್ತು ಸಂಜೆ ಒಂದು ಗಂಟೆ ಮಾತ್ರ ಹೊರಗೆ ಬಿಡಲಾಗುತ್ತಿದೆ. ಜೈಲಿನಲ್ಲಿ ಯಾವುದೇ ಅಪರಾಧ ಎಸಗದಿದ್ದರೂ 2023 ರಿಂದ ತಾನು ಏಕಾಂತ ಸೆರೆವಾಸದ ಶಿಕ್ಷೆ ಅನುಭವಿಸುತ್ತಿರುವುದಾಗಿ ಪೂನಾವಾಲಾ ನ್ಯಾಯಾಲಯಕ್ಕೆ ತಿಳಿಸಿದ್ದ. ಆತನ ಪರವಾಗಿ ವಕೀಲ ಅಕ್ಷಯ್ ಭಂಡಾರಿ ವಾದ ಮಂಡಿಸಿದರು.
ತಿಹಾರ್ ಅಧಿಕಾರಿಗಳ ಪರವಾಗಿ ಹಾಜರಾದ ದೆಹಲಿ ಸರ್ಕಾರದ (ಕ್ರಿಮಿನಲ್) ಸ್ಥಾಯಿ ವಕೀಲ ಸಂಜಯ್ ಲಾವೊ ಅವರು, ಪೂನಾವಾಲಾಗೆ ಬೆದರಿಕೆ ಇರುವ ಕಾರಣ ಆತನನ್ನು ಭದ್ರತಾ ಜೈಲಿನಲ್ಲಿ ಇರಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯುವಾಗ ಪೂನಾವಾಲಾ ಮೇಲೆ ಹಲ್ಲೆ ನಡೆಸಲಾಗಿದ್ದು ವಿಚಾರಣಾ ನ್ಯಾಯಾಲಯ ಆತನಿಗೆ ಭದ್ರತೆ ನೀಡುವಂತೆ ಆದೇಶಿಸಿತ್ತು ಎಂದು ಹೇಳಿದರು.
ವಾದ ಆಲಿಸಿದ ನ್ಯಾಯಾಲಯ, ಏಕಾಂತ ಸೆರೆವಾಸದಿಂದ ಬಿಡುಗಡೆ ಮಾಡುವಂತೆ ಪೂನಾವಾಲಾ ಖುದ್ದು ವಿನಂತಿಸಿರುವುದರಿಂದ ದಿನಕ್ಕೆ ಎಂಟು ಗಂಟೆ ಕಾಲ ಆತನನ್ನು ಏಕಾಂತ ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ಆದೇಶಿಸಿತು.
ಬಂಬಲ್ ಡೇಟಿಂಗ್ ಅಪ್ಲಿಕೇಷನ್ ಮೂಲಕ ಭೇಟಿಯಾದ ಅಫ್ತಾಬ್- ಶ್ರದ್ಧಾ ಜೋಡಿ ಸಹ ಜೀವನ (ಲಿವ್ ಇನ್) ನಡೆಸುತ್ತಿತ್ತು. ಮೂಲತಃ ಮುಂಬೈ ನಿವಾಸಿಗಳಾಗಿದ್ದ ಈ ಜೋಡಿ 2023ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಪೊಲೀಸರ ಪ್ರಕಾರ, ಮೆಹ್ರೌಲಿಯ ಬಾಡಿಗೆ ಫ್ಲಾಟ್‌ನಲ್ಲಿದ್ದ ಇಬ್ಬರ ನಡುವೆ ಕಳೆದ ವರ್ಷ ಮೇ 18 ರಂದು ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ಬೇರೆ ಬೇರೆ ಜಾಗಗಳಿಗೆ ತೆರಳಿ ದೇಹದ ತುಂಡುಗಳನ್ನು ಎಸೆದು ಬಂದಿದ್ದ.