ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಲ್ಕರ್ ಅವರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಅಫ್ತಾಬ್ ಪೂನಾವಾಲಾ ವಿರುದ್ಧ ಭಾರತೀಯ ಅಪರಾಧ ಸಂಹಿತೆಯಡಿ ಕೊಲೆ ಮತ್ತು ಸಾಕ್ಷ್ಯಾಧಾರ ಕಣ್ಮರೆ ಆರೋಪವನ್ನು ದೆಹಲಿ ನ್ಯಾಯಾಲಯ ಮಂಗಳವಾರ ನಿಗದಿಪಡಿಸಿದೆ.
ಆರೋಪ ನಿಗದಿಪಡಿಸುವ ಕುರಿತಾದ ವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಮನೀಷಾ ಖುರಾನಾ ಅವರು ಪೂನಾವಾಲಾ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.
“ಆರೋಪ ನಿಗದಿಗೆ ಸಂಬಂಧಿಸಿದ ವಾದಗಳನ್ನು ಸುದೀರ್ಘವಾಗಿ ಆಲಿಸಲಾಗಿದೆ. ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕಷ್ಟು ಸಾಕ್ಷಿಗಳು ಐಪಿಸಿ ಸೆ. 302ರ ಅಡಿ ಮೇಲ್ನೋಟಕ್ಕೆ ಸಾಬೀತಾಗಿದ್ದು ಆರೋಪ ನಿಗದಿಪಡಿಸಲಾಗುವುದು” ಎಂದರು.
ಸಾಕ್ಷ್ಯಾಧಾರಗಳ ಕಣ್ಮರೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 201ರ ಅಡಿಯಲ್ಲಿಯೂ ಆರೋಪ ನಿಗದಿಪಡಿಸಲಾಯಿತು.
"ಎರಡನೆಯದಾಗಿ, ಅಪರಾಧ ನಡೆದಿದೆ ಎಂದು ತಿಳಿದು ನಿಮ್ಮನ್ನು ಶಿಕ್ಷೆಯಿಂದ ರಕ್ಷಿಸಿಕೊಳ್ಳಲು ನೀವು (ಮೃತಳ) ದೇಹವನ್ನು ಕತ್ತರಿಸಿ ಶರೀರದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿದ್ದೀರಿ... ನೀವು ಐಪಿಸಿ ಸೆಕ್ಷನ್ 201ರ ಅಡಿ ಅಪರಾಧ ಎಸಗಿದ್ದೀರಿ," ಎಂದು ನ್ಯಾಯಾಲಯ ಹೇಳಿತು.
ಅಫ್ತಾಬ್ ವಿರುದ್ಧ ನಿಗದಿಪಡಿಸಲಾದ ಆರೋಪಗಳನ್ನು ಓದಿ ಹೇಳಿದ ನ್ಯಾಯಾಲಯ “ನೀವು ದೋಷಿ ಎಂದು ಒಪ್ಪಿಕೊಳ್ಳುತ್ತೀರಾ ಇಲ್ಲವೇ ವಿಚಾರಣೆ ಎದುರಿಸಲು ಬಯಸುತ್ತೀರಾ?” ಎಂದು ಪ್ರಶ್ನಿಸಿತು.
ಆಗ ಅಫ್ತಾಬ್ ಪರ ವಕೀಲರು ತನ್ನ ಕಕ್ಷೀದಾರ ತಪ್ಪಿತಸ್ಥ ಅಲ್ಲ. ವಿಚಾರಣೆ ನಡೆಯಬೇಕು ಎಂದು ಹೇಳುವೆ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಬಂಬಲ್ ಡೇಟಿಂಗ್ ಅಪ್ಲಿಕೇಷನ್ ಮೂಲಕ ಭೇಟಿಯಾದ ಅಫ್ತಾಬ್- ಶ್ರದ್ಧಾ ಜೋಡಿ ಸಹ ಜೀವನ (ಲಿವ್ ಇನ್) ನಡೆಸುತ್ತಿತ್ತು. ಮೂಲತಃ ಮುಂಬೈ ನಿವಾಸಿಗಳಾಗಿದ್ದ ಈ ಜೋಡಿ ಇದೇ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಪೊಲೀಸರ ಪ್ರಕಾರ, ಈ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್‌ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ.