ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಲ್ಕರ್ ಅವರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಸಿಲುಕಿರುವ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನವನ್ನು ಶುಕ್ರವಾರ ದೆಹಲಿ ನ್ಯಾಯಾಲಯವು 14 ದಿನಗಳ ಕಾಲ ವಿಸ್ತರಿಸಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಸಾಕೇತ್ ನ್ಯಾಯಾಲಯದ ನ್ಯಾಯಾಧೀಶ ಅವಿರಳ್ ಶುಕ್ಲಾ ಅವರು ಈ ಆದೇಶ ಮಾಡಿದರು. ನವೆಂಬರ್ 26ರಂದು ಪೂನಾವಾಲಾ ಅವರನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಆರೋಪಿ ಪೂನಾವಾಲಾ ಅವರ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಈ ಹಿಂದೆ ನ್ಯಾಯಾಲಯವು ಅನುಮತಿಸಿತ್ತು. ಅಫ್ತಾಬ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಶ್ರದ್ಧಾ ತಂದೆ ಕೋರಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪೂನಾವಾಲಾ ಮತ್ತು ವಾಲ್ಕರ್ ಭೇಟಿಯಾಗಿದ್ದರು. ಮೊದಲಿಗೆ ಮುಂಬೈನಲ್ಲಿದ್ದ ಅವರು ಈ ವರ್ಷದ ಆರಂಭದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಮೇ 18ರಂದು ಮೆಹ್ರೌಲಿಯ ಫ್ಲ್ಯಾಟ್‌ನಲ್ಲಿದ್ದಾಗ ಇಬ್ಬರ ನಡುವೆ ಕಲಹ ನಡೆದು, ಶ್ರದ್ಧಾ ಅವರನ್ನು ಪೂನಾವಾಲಾ ಕೊಲೆ ಮಾಡಿದ್ದರು. ಸದರಿ ಪ್ರಕರಣದ ವಿಚಾರಣೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಈಚೆಗೆ ವಜಾ ಮಾಡಿತ್ತು.