ಕಲಾಪ ನೇರಪ್ರಸಾರ ಸ್ಥಗಿತಗೊಳಿಸುವುದು ಪರಿಹಾರವಲ್ಲ: ಕರ್ನಾಟಕದ ಕೆಲ ವಕೀಲರ ಬೇಡಿಕೆಗೆ ಸುಪ್ರೀಂ ಕೋರ್ಟ್ ಗರಂ

ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಸ್ಥಗಿತಗೊಳಿಸಲು ನಿರ್ದೇಶನ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಬೆಂಗಳೂರು ವಕೀಲರ ಸಂಘ ಈಚೆಗೆ ಅರ್ಜಿ ಸಲ್ಲಿಸಿತ್ತು.
Supreme Court, Live Streaming
Supreme Court, Live Streaming
Published on

ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯದ ವೀಡಿಯೊಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಕಲಾಪಗಳ ನೇರ ಪ್ರಸಾರ ಸ್ಥಗಿತಗೊಳಿಸುವಂತೆ ವಕೀಲ ಸಮುದಾಯ ಬೇಡಿಕೆ ಇಟ್ಟಿರುವುದರ ಮಧ್ಯೆಯೇ ಈ ರೀತಿಯ ನಿರ್ಬಂಧ ಸಮಸ್ಯೆಗೆ ಪರಿಹಾರವಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಬುದ್ಧಿವಾದ ಹೇಳಿದೆ.

ನ್ಯಾಯಾಲಯ ಕಲಾಪದ ಯೂಟ್ಯೂಬ್‌ ನೇರಪ್ರಸಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಐವರು ಸದಸ್ಯರ ಪೀಠ ಈ ವಿಚಾರ ತಿಳಿಸಿತು.

Also Read
ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆಗೆ ಸುಪ್ರೀಂ ಆಕ್ಷೇಪ

ಯೂಟ್ಯೂಬ್‌ ನೇರಪ್ರಸಾರ ಸ್ಥಗಿತಗೊಳಿಸಬೇಕು ಎನ್ನುವ ಮನವಿಯ ಹಿಂದೆ ಕೆಲಸ ಮಾಡಿರುವ ಆಲೋಚನೆಯನ್ನು ತಿದ್ದುವ ಪ್ರಯತ್ನವನ್ನು ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್‌ ಮಾಡಿದರು. "ಸೂರ್ಯನ ಬೆಳಕಿಗೆ, ಸೂರ್ಯನ ಬೆಳಕೇ ಉತ್ತರ ಎಂದು ನಿಮಗೆ ನಾನು ಹೇಳಬೇಕಾಗುತ್ತದೆ. ನ್ಯಾಯಾಲಯದೊಳಗೆ ಏನಾಗುತ್ತದೆ ಎನ್ನುವುದನ್ನು ಮುಚ್ಚಿಡುವುದು ಉತ್ತರವಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ಎಲ್ಲರಿಗೂ ಅಗತ್ಯವಾಗಿ ನೆನಪಿಸಬೇಕಾಗುತ್ತದೆ. ಹಾಗಾಗಿ, ಬಾಗಿಲನ್ನು ಮುಚ್ಚುವುದು ಉತ್ತರವಲ್ಲ, ಬದಲಿಗೆ ನೋಡಿ ನಾನು ಈ ನಾಲ್ಕು ಗೋಡೆಯ ಆಚೆಗೂ ಹೇಗೆ ತಲುಪುತ್ತೇನೆ ಎನ್ನುವುದು ಉತ್ತರವಾಗಿದೆ," ಎಂದು ಸಿಜೆಐ ತಿಳಿಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿಗಳ ಹೇಳಿಕೆಗಳ ಸುತ್ತಲೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಹೇಳಿಕೆಗಳು ಸಂಕುಚಿತ ಮನೋಭಾವದಿಂದ ಕೂಡಿದ್ದವು ಎಂದು ಭಾರತದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ರೀತಿಯಾಗಿ ಪ್ರತಿಕ್ರಿಯಿಸಿತು.

ಈ ಹಂತದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ಅದರ ಅನಾಮಧೇಯತೆ ತುಂಬಾ ಅಪಾಯಕಾರಿ ಸಾಧನ ಎಂದು ಹೇಳಿದರು.

Also Read
ಮುಕ್ತ ನ್ಯಾಯಾಲಯದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಸಂಬಂಧ ವಿಷಾದ ವ್ಯಕ್ತಪಡಿಸಿದ ನ್ಯಾ. ಶ್ರೀಶಾನಂದ

ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಸ್ಥಗಿತಗೊಳಿಸಲು  ನಿರ್ದೇಶನ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಬೆಂಗಳೂರು ವಕೀಲರ ಸಂಘ ಈಚೆಗೆ ಅರ್ಜಿ ಸಲ್ಲಿಸಿತ್ತು. ಸಾರ್ವಜನಿಕರು, ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಖಾಸಗಿ ವಾಹನಿಗಳು ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ವೀಡಿಯೊಗಳನ್ನು ಬಳಸುವುದನ್ನು ಅದು ಪ್ರಶ್ನಿಸಿತ್ತು.  

“ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದು ಪಾಕಿಸ್ತಾನದಲ್ಲಿದೆ...” ಎಂದು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಕಳೆದ ಆಗಸ್ಟ್‌ 28ರಂದು ಹೇಳಿದ್ದರು. ಅಲ್ಲದೆ ಮತ್ತೊಂದು ವೀಡಿಯೊದಲ್ಲಿ ಪ್ರತಿವಾದಿ ವಕೀಲರೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಮಹಿಳಾ ವಕೀಲರೊಬ್ಬರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು. “ಅವರ ಬಗ್ಗೆ (ಎದುರು ಪಕ್ಷ) ನಿಮಗೆ ಪೂರ್ತಿ ಗೊತ್ತಿದೆ! ನಾಳೆ ಬೆಳಿಗ್ಗೆ ಕೇಳಿದರೆ ಇನ್ನೇನಾದರೂ ಹೇಳುತ್ತೀರಿ. ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂದೂ ಹೇಳುತ್ತೀರಿ” ಎಂದು ವಕೀಲೆಯನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು. 

Kannada Bar & Bench
kannada.barandbench.com