ಗುರ್ಮೀತ್ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು ಟ್ವೀಟ್‌ ಮಾಡದಂತೆ ಯೂಟ್ಯೂಬರ್‌ಗೆ ದೆಹಲಿ ಹೈಕೋರ್ಟ್ ಸೂಚನೆ

ಶ್ಯಾಮ್ ಮೀರಾ ಸಿಂಗ್ ಅವರ ಟ್ವೀಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಮನೋಜ್ ಜೈನ್, ನ್ಯಾಯ ವಿತರಣಾ ವ್ಯವಸ್ಥೆಗೆ ಅಡ್ಡಿಯಾಗುವ ಯಾವುದೇ ಹೇಳಿಕೆಯನ್ನು ಅವರು ನೀಡಬಾರದು ಎಂದರು.
ಗುರ್ಮೀತ್ ರಾಮ್ ರಹೀಮ್ ಮತ್ತು ಪತ್ರಕರ್ತ ಶ್ಯಾಮ್ ಮೀರಾ ಸಿಂಗ್
ಗುರ್ಮೀತ್ ರಾಮ್ ರಹೀಮ್ ಮತ್ತು ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಕುರಿತು ಒಂದು ದಿನದ ಹಿಂದೆ ಮಾಡಿದ್ದ ಟ್ವೀಟ್‌ಗಳನ್ನು ಅಳಿಸುವುದಾಗಿ ಯೂಟ್ಯೂಬರ್ ಮತ್ತು ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಶನಿವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಟ್ವೀಟ್ ಮಾಡುವುದಿಲ್ಲ ಎಂದು ಸಿಂಗ್ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಪ್ರಕರಣ ನ್ಯಾಯಾಲಯದಲ್ಲಿದ್ದರೂ ಹೇಳಿಕೆ ನೀಡಿದ್ದಕ್ಕೆ ಸಿಂಗ್‌ ವಿರುದ್ಧ ನ್ಯಾಯಮೂರ್ತಿ ಮನೋಜ್ ಜೈನ್ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅವರು ಈ ಭರವಸೆ ನೀಡಿದರು.

"ಪ್ರಕರಣ ನ್ಯಾಯಾಲಯದಲ್ಲಿರುವಾಗ ಟ್ವೀಟ್‌ ಮಾಡುವಂತಿಲ್ಲ... ನಿಮ್ಮ ಕಕ್ಷಿದಾರ (ಶ್ಯಾಮ್ ಮೀರಾ ಸಿಂಗ್) ಜವಾಬ್ದಾರರಾಗಬೇಕೆಂದು ನಾನು ಬಯಸುತ್ತೇನೆ. ಅವರು ಪತ್ರಕರ್ತರಾಗಿದ್ದರೆ, ಅವರು ಜವಾಬ್ದಾರಿಯುತವಾಗಿರಬೇಕು. ದಯವಿಟ್ಟು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಟ್ವೀಟ್ಗಳನ್ನು ಮಾಡಬೇಡಿ" ಎಂದು ನ್ಯಾಯಮೂರ್ತಿ ಜೈನ್ ಎಚ್ಚರಿಕೆ ನೀಡಿದರು.

ಆದರೂ, ರಾಮ್ ರಹೀಮ್ ಮಾನಹಾನಿಕರ ಎಂದು ಹೇಳಿಕೊಂಡಿರುವ ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊವನ್ನು ತೆಗೆದುಹಾಕುವಂತೆ ಶ್ಯಾಮ್ ಮೀರಾ ಸಿಂಗ್ ಅವರಿಗೆ ಪೀಠ ಶನಿವಾರ ಯಾವುದೇ ಆದೇಶ ನೀಡಲಿಲ್ಲ.

ಸಿಂಗ್ ಪರ ವಕೀಲರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ ನಂತರ ಮಧ್ಯಂತರ ನಿರ್ದೇಶನ ನೀಡುವುದಕ್ಕಾಗಿ ರಾಮ್ ರಹೀಮ್ ಅವರ ಮನವಿ ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿದೆ.

ಡಿಸೆಂಬರ್ 17 ರಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಂಗ್ ಪ್ರಕಟಿಸಿದ ವೀಡಿಯೊಗೆ ಸಂಬಂಧಿಸಿದಂತೆ ಗುರ್ಮೀತ್ ರಾಮ್ ರಹೀಮ್ ಅವರು ಶ್ಯಾಮ್ ಮೀರಾ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

"ಗುರ್ಮೀತ್ ರಾಮ್ ರಹೀಮ್ ತನ್ನ ಭಕ್ತರನ್ನು ಹೇಗೆ ಮೂರ್ಖರನ್ನಾಗಿಸಿದರು?" ಎಂಬ ಶೀರ್ಷಿಕೆಯನ್ನು ವೀಡಿಯೊಗೆ ನೀಡಲಾಗಿದೆ. ವೀಡಿಯೊದ ಕಿರುಚಿತ್ರದಲ್ಲಿ "ರಾಮ್ ರಹೀಮ್ ಕಾ ಅಸ್ಲಿ ಸಚ್ (ರಾಮ್ ರಹೀಮ್ ನ ನಿಜವಾದ ಸತ್ಯ)" ಎಂದು ಬರೆಯಲಾಗಿದೆ .

ಶುಕ್ರವಾರ ಪ್ರಕರಣದ ವಿಚಾರಣೆ ನಡೆಯುತ್ತಿದ್ದಂತೆ, ಶ್ಯಾಮ್ ಮೀರಾ ಸಿಂಗ್ ಅವರು ನ್ಯಾಯಾಲಯ ಕಲಾಪಗಳಿಗೆ ಸಂಬಂಧಿಸಿದಂತೆ ವಿವಿಧ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದರು.

ಒಂದು ಟ್ವೀಟ್‌ನಲ್ಲಿ, ಅವರು ತಮ್ಮ ವೀಡಿಯೊವನ್ನು ತೆಗೆದುಹಾಕಲು ಆದೇಶಿಸುವ ಮೊದಲು ಡೌನ್‌ಲೋಡ್‌ ಮಾಡಿ ವೀಕ್ಷಿಸುವಂತೆ ಜನರನ್ನು ಕೇಳಿದ್ದರು ಎಂದು ಆರೋಪಿಸಲಾಗಿತ್ತು.

ಗುರ್ಮೀತ್ ರಾಮ್ ರಹೀಮ್ ಪರವಾಗಿ ಹಾಜರಾದ ಹಿರಿಯ ವಕೀಲ ಮೋಹಿತ್ ಮಾಥುರ್ ಅವರು ಟ್ವೀಟ್‌ಗೆೆ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಲಯ ಪ್ರಕರಣ ಆಲಿಸಿ ನೋಟಿಸ್ ನೀಡಿದ ನಂತರವೂ, ತನ್ನ ವೀಡಿಯೊವನ್ನು ತೆಗೆದು ಹಾಕುವ ಸಾಧ್ಯತೆ ಇರುವುದರಿಂದ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಜನರಲ್ಲಿ ಸಿಂಗ್‌ ವಿನಂತಿಸಿದ್ದರು ಎಂದು ಅವರು ವಾದಿಸಿದರು.

ಸಿಂಗ್ ರೂಢಿಗತ ಅಪರಾಧಿಯಾಗಿದ್ದು ಅವರು ಯಾವುದೇ ಮಾಧ್ಯಮ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವರ ವಿರುದ್ಧ ಪ್ರಕರಣಗಳು ಬಾಕಿ ಇವೆ ಎಂದು ಮಾಥುರ್ ವಾದಿಸಿದರು.

ಬಾರ್ ಅಂಡ್ ಬೆಂಚ್‌ನಲ್ಲಿ ವರದಿಯಾದ ನಂತರವೇ ಪ್ರಕರಣದ ಬಗ್ಗೆ ಟ್ವೀಟ್ ಮಾಡಲಾಗಿದೆ ಎಂಬ ಶ್ಯಾಮ್ ಮೀರಾ ಸಿಂಗ್ ಪರ ವಕೀಲರ ಹೇಳಿಕೆಯನ್ನು ಅವರು ಪ್ರಶ್ನಿಸಿದರು.

ಈ ಮಧ್ಯೆ, ಶ್ಯಾಮ್ ಮೀರಾ ಸಿಂಗ್ ಪರವಾಗಿ ಹಾಜರಾದ ವಕೀಲರಾದ ಕಪಿಲ್ ಮದನ್ ಮತ್ತು ಗುರುಮುಖ್ ಸಿಂಗ್ ಅರೋರಾ ಅವರು, ಈ ವೀಡಿಯೊ ಅನುರಾಗ್ ತ್ರಿಪಾಠಿ ಎಂಬ ಇನ್ನೊಬ್ಬ ಪತ್ರಕರ್ತ ಬರೆದ 2018ರ ಪುಸ್ತಕವನ್ನು ಆಧರಿಸಿದೆ ಮತ್ತು ರಾಮ್ ರಹೀಮ್ ಅವರು ಸಿಂಗ್‌ ಅವರನ್ನು ದಾವೆಯಲ್ಲಿ ಪಕ್ಷಕಾರರನ್ನಾಗಿ ಮಾಡಿಲ್ಲ ಎಂದು ವಾದಿಸಿದರು.

ನ್ಯಾಯಾಲಯ ಅದನ್ನು ಪರಿಶೀಲಿಸದೆ ವೀಡಿಯೊ ತೆಗೆದುಹಾಕಲು ಆದೇಶಿಸಿದರೆ, ಅದು ತಪ್ಪು ಪೂರ್ವನಿದರ್ಶನಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ವಾದ ಪುರಸ್ಕರಿಸಿದ ನ್ಯಾಯಾಲಯ, ಜನವರಿ 4ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದು, ಅಷ್ಟರೊಳಗೆ ಶ್ಯಾಮ್ ಮೀರಾ ಸಿಂಗ್ ಅವರು ಈ ಪ್ರಕರಣಕ್ಕೆ ಉತ್ತರ ಸಲ್ಲಿಸಬೇಕು ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com