ಕ್ಲಿನಿಕ್‌ನಲ್ಲಿ ಆಲೋಪಥಿ ಔಷಧಗಳನ್ನು ಇಟ್ಟುಕೊಂಡಿರುವ ಆರೋಪ ಎದುರಿಸುತ್ತಿರುವ ಸಿದ್ಧ ಅಥವಾ ಸಾಂಪ್ರದಾಯಿಕ ಆಯುರ್ವೇದ ಪ್ರಾಕ್ಟೀಸ್ ಮಾಡುತ್ತಿರುವ ಮಹಿಳೆಯೊಬ್ಬರ ವಿರುದ್ಧದ ಪ್ರಕರಣ ರದ್ದುಪಡಿಸಲು ಮದ್ರಾಸ್ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಅರ್ಹತೆ ಹೊಂದಿರುವ ಸಿದ್ಧ ಪ್ರಾಕ್ಟೀಸ್ ಮಾಡುವವರು ಆಧುನಿಕ ವೈದ್ಯ ಪದ್ಧತಿಯನ್ನೂ ಪ್ರಾಕ್ಟೀಸ್ ಮಾಡಲು ನಿರ್ಬಂಧವಿಲ್ಲ ಎಂದು ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರ ಏಕಸದಸ್ಯ ಪೀಠ ಹೇಳಿದ್ದು, ಸಿದ್ಧ ಪ್ರಾಕ್ಟೀಸ್ ಮಾಡುತ್ತಿರುವವರು ಆಲೋಪಥಿ ಔಷಧಗಳನ್ನು ಇಡುವುದು ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ 1940ರ ಅಡಿ ಅಪರಾಧವಾಗಿದೆ ಎಂದಿದೆ.
“ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ ಸೆಕ್ಷನ್ 18(ಸಿ)ರ ಅಡಿ ಪರವಾನಗಿ ಹೊಂದಿರುವವರು ಮಾತ್ರ ಔಷಧ ಮಾರಾಟ, ಸಂಗ್ರಹ ಅಥವಾ ಪ್ರದರ್ಶನ ಮಾಡಬಹುದಾಗಿದೆ. ಇದಕ್ಕೆ ತಪ್ಪಿದ್ದಲ್ಲಿ ಸೆಕ್ಷನ್ 27(ಬಿ)(ii) ಅಡಿ ದಂಡ ವಿಧಿಸಬಹುದಾಗಿದೆ. ಪರವಾನಗಿ ಇಲ್ಲದೇ ಔಷಧಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೇ ವಿನಾ ಆಧುನಿಕ ವೈಜ್ಞಾನಿಕ ವ್ಯವಸ್ಥೆ ಬಳಕೆ ಮಾಡುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದ್ದಲ್ಲ” ಎಂದು ನ್ಯಾಯಾಲಯ ಹೇಳಿದೆ.
ಈ ನೆಲೆಯಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಕ್ಲಿನಿಕ್ ನಡೆಸುತ್ತಿರುವ ಸಿದ್ಧ ಮೆಡಿಸಿನ್ ಮತ್ತು ಸರ್ಜರಿ ಪದವೀಧರೆ ಎಸ್ ಸಿಂಧು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಖಾಸಗಿ ದೂರು ಆಧರಿಸಿ 2017ರಲ್ಲಿ ಔಷಧ ನಿಯಂತ್ರಣ ಕಚೇರಿಯ ಸಹಾಯಕ ನಿರ್ದೇಶಕರು ಸಿದ್ಧ ಕ್ಲಿನಿಕ್‌ನಲ್ಲಿ ಶೋಧ ನಡೆಸಿ, 29 ವಿಧದ ಬಳಕೆ ಮಾಡಿರುವ ಮತ್ತು ಬಳಕೆ ಮಾಡದ ಆಲೋಪಥಿ ಔಷಧಗಳನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದತಿ ಕೋರಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.