ಐಪಿಸಿ ಮತ್ತು ಯುಎಪಿಎ ಕಾಯಿದೆಗಳ ಅಡಿಯಲ್ಲಿ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ವಿರುದ್ಧ ಆರೋಪ ನಿಗದಿಪಡಿಸಿ ವಿಚಾರಣಾ ನ್ಯಾಯಾಲಯವೊಂದು ನೀಡಿದ್ದ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಅಲ್ಲದೆ ಕಪ್ಪನ್ ಅವರು ಸಲ್ಲಿಸಿರುವ ಆರೋಪ ವಿಮುಕ್ತಿ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಿ ಆ ಬಗ್ಗೆ ಆದೇಶ ನೀಡುವಂತೆ ಲಖನೌದ ವಿಚಾರಣಾ ನ್ಯಾಯಾಲಯಕ್ಕೆ ನ್ಯಾ. ಶ್ರೀ ಪ್ರಕಾಶ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಸೂಚಿಸಿತು.
ವಿಚಾರಣಾ ನ್ಯಾಯಾಲಯ ಕಪ್ಪನ್ ಸಲ್ಲಿಸಿದ್ದ ಆರೋಪ ವಿಮುಕ್ತಿ ಅರ್ಜಿ ಆಲಿಸಿಲ್ಲ ಎಂದಿರುವ ನ್ಯಾಯಾಲಯ, 2022ರ ಡಿಸೆಂಬರ್ 19ರಂದು ನೀಡಿದ್ದ ಆದೇಶದಲ್ಲಿ ಕೆಲವು ಅಕ್ರಮ ಮತ್ತು ಅಸ್ಪಷ್ಟತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದಿದೆ.
"ಪರಿಣಾಮವಾಗಿ, 2022ರ ಡಿಸೆಂಬರ್ 19ಕ್ಕೆ ಸಂಬಂಧಿಸಿದ ಮನವಿದಾರರ ಆರೋಪ ವಿಮುಕ್ತಿ ಅರ್ಜಿಯನ್ನು ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣ ಹಿಂತಿರುಗಿಸಲಾಗುತ್ತದೆ. ವಿಚಾರಣಾ ನ್ಯಾಯಾಲಯದ ಮುಂದೆ 27-1-2023ರಂದು ಹಾಜರಾಗಲು ಸಂಬಂಧಪಟ್ಟ ಪಕ್ಷಕಾರರಿಗೆ ನಿರ್ದೇಶಿಸಲಾಗಿದೆ. ಅರ್ಜಿದಾರರ ವಕೀಲರು ಕೂಡ ಅಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಕಕ್ಷಿದಾರರ ವಾದ ಆಲಿಸಿದ ನಂತರ, ವಿಚಾರಣಾ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರೆಯಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಸಂಬಂಧಪಟ್ಟ ಕಕ್ಷಿದಾರರು ಜನವರಿ 27ರಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು. ಈ ಸಂಬಂಧ ಪ್ರಕರಣ ಮುಂದೂಡುವಂತೆ ಕಕ್ಷಿದಾರರು ಕೋರುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.