ಎರಡು ವರ್ಷಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಕೇರಳ ಪತ್ರಕರ್ತ ಸಿದ್ದೀಕ್‌ ಕಪ್ಪನ್

ಕಪ್ಪನ್ ಅವರಿಂದ ಜಾಮೀನು ಬಾಂಡ್ ಪಡೆದು ಬಿಡುಗಡೆಗೊಳಿಸುವಂತೆ ಲಖನೌದ ಸೆಷನ್ಸ್ ನ್ಯಾಯಾಧೀಶರು ಬುಧವಾರ ಆದೇಶಿಸಿದ್ದರು.
Siddique Kappan
Siddique Kappan

ಎರಡು ವರ್ಷಗಳ ಹಿಂದೆ ಹಾಥ್‌ರಸ್‌ ದಲಿತ ಬಾಲಕಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ತೆರಳಿ ಬಂಧಿತರಾಗಿದ್ದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಗುರುವಾರ ಬೆಳಗ್ಗೆ ಉತ್ತರ ಪ್ರದೇಶದ ಲಖನೌ ಜೈಲಿನಿಂದ ಬಿಡುಗಡೆಯಾದರು.

ಕಪ್ಪನ್‌ ಅವರಿಂದ ಜಾಮೀನು ಬಾಂಡ್‌ ಪಡೆದು ಬಿಡುಗಡೆಗೊಳಿಸುವಂತೆ ಲಖನೌದ ಸೆಷನ್ಸ್‌ ನ್ಯಾಯಾಧೀಶರು ಬುಧವಾರ ಆದೇಶಿಸಿದ್ದರು.

ಮಲಯಾಳಂ ಸುದ್ದಿತಾಣ ಅರಿಮುಖಂ ವರದಿಗಾರ ಸಿದ್ದೀಕ್‌ ಕಪ್ಪನ್ ಸೇರಿದಂತೆ ಮೂವರನ್ನು 2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. 

Also Read
ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಡಿಸೆಂಬರ್ 2020ರಿಂದ ಅವರು ಲಖನೌ ಜಿಲ್ಲಾ ಕಾರಾಗೃಹದಲ್ಲಿದ್ದರು.

ಯುಎಪಿಎ ಪ್ರಕರಣದಲ್ಲಿ ಕೆಳ ನ್ಯಾಯಾಲಯಗಳು ಮತ್ತು ಅಲಾಹಾಬಾದ್‌ ಹೈಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿದ್ದವು. ಸುಪ್ರೀಂ ಕೋರ್ಟ್‌ ಆಗಸ್ಟ್ 2022ರಲ್ಲಿ ಅವರಿಗೆ ಜಾಮೀನು ನೀಡಿತ್ತು. ಪಿಎಂಎಲ್‌ಎ ಅಡಿಯಲ್ಲಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಡಿಸೆಂಬರ್ 2022ರಲ್ಲಿ ಅವರು ಅಲಾಹಾಬಾದ್‌ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಸಿದ್ದೀಕ್‌ ಅವರ ಬಿಡುಗಡೆಗೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಕಾನೂನು ಹೋರಾಟ ನಡೆಸಿತ್ತು.

Kannada Bar & Bench
kannada.barandbench.com