ಸೇನಾನೆಲೆಗಳಲ್ಲಿ 'ಕಂಡಲ್ಲಿ ಗುಂಡುʼ ಫಲಕದ ಎಚ್ಚರಿಕೆ ಸಮಂಜಸವಲ್ಲ: ಅಲಾಹಾಬಾದ್ ಹೈಕೋರ್ಟ್

ಕಳೆದ ಫೆಬ್ರವರಿಯಲ್ಲಿ ಮದ್ಯದ ಅಮಲಿನಲ್ಲಿ ವಾಯುಸೇನಾ ನೆಲೆಯನ್ನು ಅಕ್ರಮವಾಗಿ ಪ್ರವೇಶಿಸಿದ ನೇಪಾಳಿ ಪ್ರಜೆಗೆ ಜಾಮೀನು ನೀಡುವ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
Social media post by Indian ArmyADGPI - Indian Army (Facebook);
Social media post by Indian ArmyADGPI - Indian Army (Facebook); Image for representative purposes

ಸೇನಾ ನಿರ್ಮಿತಿಗಳ ಹೊರಗೆ ಅತಿಕ್ರಮಣಕಾರರಿಗೆ ಗುಂಡಿಕ್ಕಲಾಗುವುದು ಎಂದು ಫಲಕ ಹಾಕುವುದು ಸೂಕ್ತವಲ್ಲ. ಅತಿಕ್ರಮಣ ತಡೆಯುವ ಕುರಿತಾದ ಎಚ್ಚರಿಕೆ ನೀಡಲು ಸಶಸ್ತ್ರ ಪಡೆಗಳು ಕಡಿಮೆ ತೀವ್ರತೆಯ ಪದಗಳನ್ನು ಬಳಸಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಹೇಳಿದೆ [ಎತ್ವಿರ್‌ ಲಿಂಬು ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಕಂಡಲ್ಲಿ ಗುಂಡು ಎಂಬಂತಹ ಪದಗಳು ದಾರಿಹೋಕರ ಅದರಲ್ಲೂ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ನ್ಯಾ. ಶೇಖರ್‌ ಕುಮಾರ್‌ ಯಾದವ್‌ ತಿಳಿಸಿದ್ದಾರೆ. ಅಂತಹ ಪದಗಳ ಬದಲಿಗೆ ಅತಿಕ್ರಮಣಕಾರರ ವಿರುದ್ಧ ʼಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದುʼ ಎಂದು ಬರೆಯಬಹುದು ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

“ಸುರಕ್ಷತೆಯ ಕಾರಣಕ್ಕೆ ಅತಿಕ್ರಮಣಕಾರರರು  ಸಶಸ್ತ್ರ ಪಡೆಗಳ ಆವರಣಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ ಎಂಬುದು ನಿಜ, ಆದರೆ ಸಶಸ್ತ್ರ ಪಡೆಗಳ ನಿರ್ಮಿತಿಗಳು ಸಾಮಾನ್ಯ ಜನರು ಅದರಲ್ಲಿಯೂ ಮಕ್ಕಳು ಓಡಾಡುವ ಸಾರ್ವಜನಿಕ ಸ್ಥಳದಲ್ಲಿ ಇದ್ದಾಗ ʼಕಂಡಲ್ಲಿ ಗುಂಡು ಹಾರಿಸಲಾಗುವುದುʼ ಎಂಬ ಭಾಷಾಪ್ರಯೋಗ ನನ್ನ ಅಭಿಪ್ರಾಯದಲ್ಲಿ ಸರಿಯಲ್ಲ. ಈ ರೀತಿಯ ಪದಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಕೇಂದ್ರ ಸರ್ಕಾರ ಇಂತಹ ಪದಗಳನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕು. ಅತಿಕ್ರಮಣಕಾರರಿಗೆ ಗುಂಡು ಹಾರಿಸಲಾಗುತ್ತದೆ ಮತ್ತು ಕಂಡಲ್ಲಿ ಗುಂಡು ಹಾರಿಸಲಾಗುತ್ತದೆ ಎಂಬ ಪದಗಳ ಬದಲಿಗೆ ಕಡಿಮೆ ತೀವ್ರತೆಯ ಪದಗಳನ್ನು ಬಳಸಬೇಕು” ಎಂದು ನ್ಯಾಯಾಲಯ ಮೇ 31ರಂದು ಪ್ರಕಟಿಸಿದ ಆದೇಶದಲ್ಲಿ ತಿಳಿಸಿದೆ.

ಕಳೆದ ಫೆಬ್ರವರಿಯಲ್ಲಿ ಮದ್ಯದ ಅಮಲಿನಲ್ಲಿ ವಾಯುಪಡೆಯ ನಿಲ್ದಾಣವನ್ನು ಅಕ್ರಮವಾಗಿ ಪ್ರವೇಶಿಸಿದ ನೇಪಾಳಿ ಪ್ರಜೆಗೆ ಜಾಮೀನು ನೀಡುವ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಭಾರತೀಯ ದಂಡ ಸಂಹಿತೆ ಮತ್ತು ಅಧಿಕೃತ ರಹಸ್ಯ ಕಾಯಿದೆಯಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಪಕ್ಷಕಾರನನ್ನಾಗಿಸಿದ ನ್ಯಾಯಾಲಯ ಕಾನೂನುಬಾಹಿರ ನುಸುಳುವಿಕೆ, ಅತಿಕ್ರಮಣ ಹಾಗೂ ಅನಧಿಕೃತ ಪ್ರವೇಶ ತಡೆಯಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿತು.

ರಕ್ಷಣಾ ನೆಲೆಗಳಿಗೆ ನುಗ್ಗುವುದನ್ನು ತಡೆಯಲು ವಿವಿಧ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದರೂ, ಅತಿಕ್ರಮಣ ಹೆಚ್ಚುತ್ತಿದೆ ಎಂದು ವಾಯುಪಡೆ ನ್ಯಾಯಾಲಯಕ್ಕೆ ಅಫಿಡವಿಟ್‌ ಮೂಲಕ ತಿಳಿಸಿತ್ತು. ಪಠಾಣ್‌ಕೋಟ್, ಉರಿ ಸೇನಾನೆಲೆಯಲ್ಲಿ ಭಯೋತ್ಪಾದನಾ ದಾಳಿ ನಂತರ ಭದ್ರತೆಗಾಗಿ ಎಚ್ಚರಿಕೆ ಫಲಕಗಳಂತಹ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಲಾಗಿತ್ತು.

ಅತಿಕ್ರಮಣಕಾರರು ರಕ್ಷಣಾ ಕಚೇರಿಯ ಆವರಣಕ್ಕೆ ಪ್ರವೇಶಿಸಲು ಅನುಮತಿಸಬಾರದು ಎಂದು ನ್ಯಾಯಾಲಯ ಹೇಳಿತಾದರೂ ಹಾಗೆ ನೇರವಾದ ಭಾಷೆಯ ಬಳಕೆಯನ್ನು ತಪ್ಪಿಸಬಹುದು ಎಂದು ಇದೇ ವೇಳೆ ಅಭಿಪ್ರಾಯಪಟ್ಟಿತು.

Kannada Bar & Bench
kannada.barandbench.com