ಅತ್ಯಾಚಾರ ಪ್ರಕರಣ: ಶಾಸಕ ಸಿಮರ್‌ಜೀತ್‌ ಬೈನ್ಸ್‌ ಧೋರಣೆ ಬಗ್ಗೆ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್‌

"ನಿಮ್ಮ ಕಕ್ಷಿದಾರರ ಧೋರಣೆಯನ್ನು ಗಮನಿಸಿದ್ದೀರಾ? ಅವರು ಎರಡು ಬಾರಿ ಶಾಸಕರಾಗಿದ್ದಾರೆ, ಹಾಗಿದ್ದರೂ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಆ ಮಹಿಳೆಯ ವಿರುದ್ಧ ಅವರು ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ ನೋಡಿ" ಎಂದು ಕಟುವಾಗಿ ನುಡಿದ ಪೀಠ.
simarjeet singh bains and supreme court

simarjeet singh bains and supreme court

facebook

Published on

ಅತ್ಯಾಚಾರದ ಆರೋಪ ಎದುರಿಸುತ್ತಿರುವ ಪಂಜಾಬ್‌ ವಿಧಾನಸಭೆಯ ಶಾಸಕ, ಲೋಕ್‌ ಇನ್ಸಾಫ್‌ ಪಕ್ಷದ ಮುಖಂಡ ಸಿಮರ್‌ಜೀತ್‌ ಸಿಂಗ್‌ ಬೈನ್ಸ್‌ ಅವರ ಧೋರಣೆಯ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ಕೆಂಡಾಮಂಡಲವಾಯಿತು [ಸಿಮರ್‌ಜೀತ್‌ ಸಿಂಗ್‌ ಬೈನ್ಸ್‌ ವರ್ಸಸ್‌ ಪಂಜಾಬ್‌ ಸರ್ಕಾರ]. ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ಬೈನ್ಸ್‌ ಅವರು ದೂರುದಾರರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದರು.

ವಿಚಾರಣೆಯ ಒಂದು ಹಂತದಲ್ಲಿ ಸಿಜೆಐ ಎನ್‌ ವಿ ರಮಣ ನೇತೃತ್ವದ ಪೀಠವು, "ನಿಮ್ಮ ಕಕ್ಷಿದಾರರ ಧೋರಣೆಯನ್ನು ಗಮನಿಸಿದ್ದೀರಾ? ಅವರು ಎರಡು ಬಾರಿ ಶಾಸಕರಾಗಿದ್ದಾರೆ, ಹಾಗಿದ್ದರೂ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಆ ಮಹಿಳೆಯ ವಿರುದ್ಧ ಅವರು ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ ನೋಡಿ. ಈಗ ತಮಗೆ ನಿರೀಕ್ಷಣಾ ಜಾಮೀನು ಕೋರುತ್ತಿದ್ದಾರೆ. ಪೊಲೀಸ್‌ ಯಂತ್ರದ ದುರ್ಬಳಕೆಯಲ್ಲಿ ಪ್ರಭುತ್ವವು ಭಾಗಿಯಾಗಲು ಸಾಧ್ಯವಿಲ್ಲ," ಎಂದು ಬೈನ್ಸ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರನ್ನು ಉದ್ದೇಶಿಸಿ ಹೇಳಿತು.

ಈ ವೇಳೆ ದೂರುದಾರ ಮಹಿಳೆಯು ಕೆನಡಾದಲ್ಲಿ ಕೂತು ಹಲವು ದೂರುಗಳನ್ನು ದಾಖಲಿಸುತ್ತಿರುವ ಬಗ್ಗೆ ಆರೋಪಿಸಿ ರೋಹಟ್ಗಿ ಅವರು ಪೀಠದ ಗಮನಸೆಳೆಯುಲು ಮುಂದಾದರು. ಆದರೆ, ಇದರಿಂದ ತೃಪ್ತವಾಗದ ಪೀಠವು ದೂರುದಾರೆಯನ್ನು ರಕ್ಷಿಸುವುದಾಗಿ ತಿಳಿಸಿತು. ಪ್ರಕರಣದ ಸಂಬಂಧ ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚಿಸಿತು.

ಅಂತಿಮವಾಗಿ ನ್ಯಾಯಾಲಯವು ಪಂಜಾಬ್‌ ಸರ್ಕಾರಕ್ಕೆ ಪ್ರಕರಣದಲ್ಲಿ ಪ್ರತಿಕ್ರಿಯೆ ದಾಖಲಿಸಲು ಒಂದು ವಾರದ ಕಾಲಾವಕಾಶ ನೀಡಿತು. ಈ ಅವಧಿಯಲ್ಲಿ ಬೈನ್ಸ್‌ ಅವರನ್ನು ಬಂಧಿಸದಂತೆ ಹಾಗೂ ದೂರುದಾರೆ ಮಹಿಳೆಯ ವಿರುದ್ಧದ ಎಲ್ಲ ನಾಲ್ಕು ಪ್ರಕರಣಗಳನ್ನು ತಡೆಹಿಡಿಯುವಂತೆ ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಹಾಗೂ ಹಿಮಾ ಕೋಹ್ಲಿ ಅವರನ್ನು ಒಳಗೊಂಡ ಪೀಠವು ನಿರ್ದೇಶಿಸಿತು. ಒಂದು ವಾರದ ನಂತರ ಪ್ರಕರಣವನ್ನು ಪಟ್ಟಿ ಮಾಡಲು ಸೂಚಿಸಿತು.

Kannada Bar & Bench
kannada.barandbench.com