ಭಾರತದಲ್ಲಿ ಇಸ್ಲಾಂ ಆಡಳಿತ ಜಾರಿಗೊಳಿಸುವ ಸಿಮಿ ಉದ್ದೇಶವನ್ನು ಅನುಮತಿಸಲಾಗದು: ಸುಪ್ರೀಂಗೆ ಕೇಂದ್ರದ ವಿವರಣೆ

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್‌ ಆಫ್ ಇಂಡಿಯಾ ಮೇಲಿನ ನಿಷೇಧವನ್ನು ವಿಸ್ತರಿಸುವ 2019ರ ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಗೆ ಪ್ರತಿಯಾಗಿ ಕೇಂದ್ರವು ಅಫಿಡವಿಟ್‌ ಸಲ್ಲಿಸಿದೆ.
Supreme Court of India
Supreme Court of India

ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಧ್ಯೇಯ ಭಾರತದ ಪ್ರಜಾಸತ್ತಾತ್ಮಕ, ಸಾರ್ವಭೌಮ ಅಸ್ತಿತ್ವದೊಂದಿಗೆ ನೇರ ಸಂಘರ್ಷದಲ್ಲಿರುವುದರಿಂದ ಸಂಘಟನೆ ಮೇಲೆ ಕೇಂದ್ರ ಗೃಹ ಸಚಿವಾಲಯ ಹೇರಿರುವ ನಿಷೇಧ  ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಂಘಟನೆಯ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ  ಕೇಂದ್ರ ಸರ್ಕಾರವು ಪ್ರತಿ-ಅಫಿಡವಿಟ್ ಸಲ್ಲಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ಸಂಘಟನೆಯ ಮೇಲೆ ವಿಧಿಸಲಾದ ನಿಷೇಧ ವಿಸ್ತರಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ 2019ರ ಅಧಿಸೂಚನೆಯನ್ನು ಸಂಘಟನೆಯ ಮಾಜಿ ಸದಸ್ಯ ಹುಮಾಮ್ ಅಹ್ಮದ್ ಸಿದ್ದಿಕಿ ಪ್ರಶ್ನಿಸಿದ್ದರು. ಪ್ರಕರಣವನ್ನು ನ್ಯಾ. ಸಂಜಯ್‌ ಕಿಶನ್‌ ಕೌಲ್‌ ಅವರಿರುವ ಪೀಠ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಸರ್ಕಾರದ ಆಕ್ಷೇಪ ಏನು?

  • ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಇರುವ ಅರ್ಹತೆ ಏನು? ಅವರು ಸಂಸ್ಥೆಯ ಪದಾಧಿಕಾರಿಯಾಗಲೀ ಸದಸ್ಯರಾಗಲೀ ಅಲ್ಲ. ಯುಎಪಿಎ ಕಾಯಿದೆಯ ಸೆಕ್ಷನ್ 4(2) ಹಾಗೂ ಸೆಕ್ಷನ್‌ 4(3)ರ ಅಡಿ ಪದಾಧಿಕಾರಿಗಳು ಅಥವಾ ಸದಸ್ಯರು ಮಾತ್ರ ನಿಷೇಧ ಪ್ರಶ್ನಿಸಬಹುದು.

  • ಸಿಮಿಯ ರಚನೆ ದೇಶದ ಸಾರ್ವಭೌಮತ್ವ ಮತ್ತು ಏಕತೆ ಮೇಲಷ್ಟೇ ಧಕ್ಕೆ ತರುವುದಿಲ್ಲ ಬದಲಿಗೆ ಕಾಯಿದೆಯ ಸೆಕ್ಷನ್‌ 153 ಎ ಮತ್ತು 153 ಬಿ ಅಡಿಯೂ ಅಪರಾಧಕ್ಕೆ ಕಾರಣವಾಗುತ್ತದೆ.    

  • ಸಂಘಟನೆಯ ಪ್ರತಿಜ್ಞಾ ವಿಧಿಯಲ್ಲಿ ಅದರ ಕಾರ್ಯಕರ್ತರು ತನ್ನ ದೇಶದಲ್ಲಿ ಇಸ್ಲಾಂ ವ್ಯವಸ್ಥೆಯನ್ನು ಸ್ಥಾಪಿಸಲು ಕೆಲಸ ಮಾಡಬೇಕು ಎಂದು ಹೇಳುವುದರಿಂದ ಅರ್ಜಿ ವಿಚಾರಣಾರ್ಹವಲ್ಲ.

  • ಯುವಕರನ್ನು ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಸಜ್ಜುಗೊಳಿಸುವುದು ಮತ್ತು 'ಜಿಹಾದ್' ಅನ್ನು ಬೆಂಬಲಿಸುವ ಗುರಿ ಸಿಮಿಗೆ ಇದೆ. 'ಇಸ್ಲಾಮಿ ಇನ್‌ಕ್ವಿಲಾಬ್‌' ಮೂಲಕ 'ಶರಿಯತ್' ಆಧಾರಿತ ಇಸ್ಲಾಮ್‌ ಪ್ರಭುತ್ವ ರಚನೆಗೆ ಒತ್ತು ನೀಡುತ್ತದೆ.

  • ಸಂಘಟನೆಗೆ ರಾಷ್ಟ್ರ ಪ್ರಭುತ್ವದಲ್ಲಿ ಅಥವಾ ಜಾತ್ಯತೀತ ಸ್ವರೂಪವನ್ನು ಒಳಗೊಂಡ ಭಾರತೀಯ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಇದು ವಿಗ್ರಹಾರಾಧನೆಯನ್ನು ಪಾಪವೆಂದು ಪರಿಗಣಿಸಿ ಅಂತಹ ಆಚರಣೆಗಳನ್ನು ಕೊನೆಗೊಳಿಸುವುದು ತನ್ನ ಕರ್ತವ್ಯ ಎಂದು ಪ್ರಚಾರ ಮಾಡುತ್ತದೆ. 

  • ಪಾಕಿಸ್ತಾನ, ಆಫ್ಘಾನಿಸ್ತಾನ, ಸೌದಿ ಅರೇಬಿಯಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಸಿಮಿ ಸಂಪರ್ಕ ಹೊಂದಿದೆ. ಜಮ್ಮು ಕಾಶ್ಮೀರದಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳಿಂದ ಇದು ಪ್ರಭಾವಿತವಾಗಿದೆ ಹೀಗಾಗಿ ಸಿಮಿಯನ್ನು ಅವು ಬಳಸಿಕೊಳ್ಳುತ್ತಿವೆ.  

  • ಹಿಜ್ಬುಲ್‌ ಮುಜಾಹಿದ್ದೀನ್‌ ಮತ್ತು ಲಷ್ಕರ್‌ ಎ ತಯ್ಯಬಾದಂತಹ ಉಗ್ರ ಸಂಘಟನೆಗಳು ಸಿಮಿ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡುವಲ್ಲಿ ಯಶಸ್ವಿಯಾಗಿವೆ.

  • ಸಿಮಿ ದೇಶದ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು ಖಲೀಫರ ಪ್ರಭುತ್ವ ನಿರ್ಮಿಸುವುದಕ್ಕಾಗಿ ಬೆಂಬಲ ಪಡೆಯಲು ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದೆ.

  • ಭಾರತೀಯ ರಾಷ್ಟ್ರೀಯತೆಗೆ ಸಿಮಿ ವಿರುದ್ಧವಾಗಿದ್ದು ಅಂತರರಾಷ್ಟ್ರೀಯ ಇಸ್ಲಾಮಿಕ್‌ ಆಡಳಿತವಾಗಿ ಇದನ್ನು ಪರಿವರ್ತಿಸಲು ಹೊರಟಿದೆ.

  • ಸಂಘಟನೆಯನ್ನು ನಿಷೇಧಿಸಲಾಗಿದ್ದರೂ ಅದು ರಹಸ್ಯವಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಿದೆ. ಕಾರ್ಯಕರ್ತರು ಸಂಚು ರೂಪಿಸುವುದರಲ್ಲಿ, ಶಸ್ತ್ರಾಸ್ತ್ರ ಸಂಗ್ರಹದಲ್ಲಿ ತೊಡಗಿದ್ದಾರೆ. ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಅವರು ನಿರತರಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com