“ಸಂತ್ರಸ್ತೆಯನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿರುವುದರಿಂದ ಈ ಹಂತದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ” ಎಂದು ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ತಮ್ಮ ಆದೇಶದಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತೆಯಾಗಿರುವ ದೂರುದಾರರ ತಾಯಿಯನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುತ್ತಿರುವುದರಿಂದ ಈ ಹಂತದಲ್ಲಿ ಐಪಿಸಿ ಸೆಕ್ಷನ್ 364-ಎ ಅನ್ವಯಿಸಿರುವ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆಯ ಬದುಕು ಮತ್ತು ಸ್ವಾತಂತ್ರ್ಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಇದು ಸಂವಿಧಾನದ 21ನೇ ವಿಧಿಯ ಅಡಿ ಮೂಲಭೂತ ಹಕ್ಕಾಗಿದೆ. ದೂರುದಾರರು/ಸಂತ್ರಸ್ತೆ ಮತ್ತು ಆರೋಪಿಯ ಹಕ್ಕನ್ನು ಸರಿದೂಗಿಸಬೇಕಿದೆ. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿರುವಂತೆ ಮಧ್ಯಂತರ ಜಾಮೀನು ಅಥವಾ ನಿರೀಕ್ಷಣಾ ಜಾಮೀನನ್ನು ಯಾಂತ್ರಿಕವಾಗಿ ನೀಡಲಾಗದು. ಆರೋಪಗಳ ಗಂಭೀರತೆ, ಪ್ರಕರಣದ ವಾಸ್ತವಿಕ ಅಂಶಗಳು ಮತ್ತು ಪರಿಸ್ಥಿತಿಯನ್ನು ಪರಿಗಣಿಸಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಇದಿಷ್ಟೇ ಅಲ್ಲದೆ, ಎಸ್‌ಐಟಿ ಮುಂದೆ ಹಾಜರಾಗದೆ ಇರಲು ರೇವಣ್ಣ ಕಾರಣ ನೀಡಿ ಸಲ್ಲಿಸಿದ್ದ ಮನವಿ ಹಾಗೂ ನ್ಯಾಯಾಲಯದ ಮುಂದೆ ಇಂದು ರೇವಣ್ಣ ಪರವಾಗಿ ಸಲ್ಲಿಸಿದ್ದ ಮೆಮೋದಲ್ಲಿ ನೀಡಲಾಗಿದ್ದ ಕಾರಣಗಳಲ್ಲಿ ತಾಳಮೇಳ ಇಲ್ಲದೆ ಇರುವುದನ್ನು ಕೂಡ ನ್ಯಾಯಾಲಯದ ಗಮನಕ್ಕೆ ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ತಂದರು. ರೇವಣ್ಣ ಪರವಾಗಿ ನ್ಯಾಯಾಲಯದಲ್ಲಿ ಇಂದು ಸಲ್ಲಿಸಿದ್ದ ಮೆಮೋದಲ್ಲಿ ಅವರು ತಮ್ಮ ವೃದ್ಧ ತಂದೆ ತಾಯಿಗಳನ್ನು (ದೇವೇಗೌಡರು ಮತ್ತು ಚೆನ್ನಮ್ಮನವರು) ನೋಡಿಕೊಳ್ಳಬೇಕಿದೆ ಎಂದು ತಿಳಿಸಲಾಗಿತ್ತು. ಇದನ್ನೂ ಕೂಡ ನಿರೀಕ್ಷಣಾ ಜಾಮೀನು ಕೋರಿಕೆಗೆ ಒಂದು ಕಾರಣವಾಗಿ ಹೇಳಲಾಗಿತ್ತು.
ಪ್ರಕರಣದ ಹಿನ್ನೆಲೆ: ಪ್ರಕರಣದ ದೂರುದಾರರು ತಮ್ಮ ದೂರಿನಲ್ಲಿ ತನ್ನ ತಾಯಿ ಕಳೆದ ಆರು ವರ್ಷಗಳಿಂದ ಹೊಳೆನರಸೀಪುರದ ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದು, ಈಚೆಗೆ ಕೆಲಸ ತೊರೆದು ದಿನಗೂಲಿ ಕಾರ್ಮಿಕರಾಗಿ ಬದುಕು ಸಾಗಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಮೂರ್ನಾಲ್ಕು ದಿನ ಬಾಕಿ ಇರುವಾಗ ಪರಿಚಿತರಾದ ಎರಡನೇ ಆರೋಪಿ ಸತೀಶ್ ಬಾಬಣ್ಣ ಅವರು ತನ್ನ ಜೊತೆ ಬರುವಂತೆ ಕೇಳಿದ್ದರು. ಚುನಾವಣೆಯ ದಿನ ವಾಪಸಾಗಿದ್ದರು. ಏಪ್ರಿಲ್ 29ರಂದು ರಾತ್ರಿ 9 ಗಂಟೆಗೆ ಮತ್ತೊಮ್ಮೆ ಸತೀಶ್ ಬಾಬಣ್ಣ ಮನೆಗೆ ಬಂದು ರೇವಣ್ಣ ಕರೆತರಲು ಹೇಳಿದ್ದಾರೆ ಎಂದು ತಾಯಿಯನ್ನು ಕರೆದುಕೊಂಡು ಹೋಗಿದ್ದರು. ಅಂದಿನಿಂದ ತಾಯಿ ಮನೆಗೆ ಮರಳಿಲ್ಲ. ಆನಂತರ ಗೆಳೆಯರೊಬ್ಬರು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ತಮ್ಮ ತಾಯಿಯೂ ಇರುವ ವಿಡಿಯೊ ವೈರಲ್ ಆಗಿರುವುದನ್ನು ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ತಾಯಿಯನ್ನು ವಾಪಸ್ ಕಳುಹಿಸುವಂತೆ ಸತೀಶ್ ಬಾಬಣ್ಣಗೆ ಕೋರಿದ್ದು, ಅವರು ಅದಕ್ಕೆ ನಿರಾಕರಿಸಿದ್ದರು ಎಂದು ತಿಳಿಸಿದ್ದಾರೆ . ಮೇ 2ರಂದು ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಕೆ ಆರ್ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 364(ಎ), 365 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ.