ಹಣಕ್ಕಾಗಿ ಉನ್ನತ ಹುದ್ದೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ

ಹಣ ಪಡೆದು 'ಆಯಕಟ್ಟಿನ ಹುದ್ದೆ'ಗಳನ್ನು ನೀಡಲಾಗುತ್ತದೆ ಎಂಬುದನ್ನು ರಾಜ್ಯದ ಜನರು ಆಗಾಗ್ಗೆ ಕೇಳುತ್ತಲೇ ಇರುತ್ತಾರೆ. ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ಮತ್ತು ಮಾಹಿತಿ ಪ್ರಕಟವಾಗುತ್ತಿರುತ್ತವೆ ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿತು.
ಹಣಕ್ಕಾಗಿ ಉನ್ನತ ಹುದ್ದೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ

ಸಾರ್ವಜನಿಕ ಹಿತಾಸಕ್ತಿಯಿಂದ ಹೊರತಾಗಿ, ಹಣಕಾಸಿನ ಕಾರಣಗಳಿಗಾಗಿ ಸರ್ಕಾರಿ ಹುದ್ದೆಗಳನ್ನು ನೀಡುವ ವಿನಾಶಕಾರಿ ಅಭ್ಯಾಸಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಏಕಸದಸ್ಯ ಪೀಠವೊಂದು ಒತ್ತಾಯಿಸಿದೆ.

“ಹಣ ಪಡೆದು 'ಆಯಕಟ್ಟಿನ ಹುದ್ದೆ'ಗಳನ್ನು ನೀಡಲಾಗುತ್ತದೆ ಎಂಬುದನ್ನು ರಾಜ್ಯದ ಜನರು ಆಗಾಗ್ಗೆ ಕೇಳುತ್ತಲೇ ಇರುತ್ತಾರೆ. ರಾಷ್ಟ್ರೀಯ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ಮತ್ತು ಮಾಹಿತಿ ಪ್ರಕಟವಾಗುತ್ತಿರುತ್ತದೆ. ಸಾಮಾಜಿಕ ಕಾರ್ಯಕರ್ತರು, ವಿರೋಧಪಕ್ಷಗಳ ನಾಯಕರು ಈ ಕುರಿತು ಆರೋಪಗಳನ್ನು ಮಾಡುತ್ತಾರೆ. ಸರ್ಕಾರ ರಚಿಸಿರುವ ಎಲ್ಲಾ ಪಕ್ಷಗಳನ್ನು ಸೇರಿದಂತೆ ಇಲಾಖೆಗಳ ಮುಖ್ಯಸ್ಥರು, ಸಚಿವರು ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಆರೋಪಗಳು ಕೇಳಿಬರುತ್ತಿರುತ್ತವೆ” ಎಂದು‌ ಮಾರ್ಚ್ 15 ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಆರ್ ದೇವದಾಸ್ ಅವರು ವಿವರಿಸಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗಾಗಿ ಕೆಲವು ನಿಯಮ ಜಾರಿಗೊಳಿಸಲು ಇದು ಸಕಾಲವಾಗಿದ್ದು ನ್ಯಾಯಾಲಯ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಭೂ ಮಂಜೂರಾತಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಹಶೀಲ್ದಾರ್ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಹಾಯಕ ಆಯುಕ್ತರ (ಎಸಿ) ಹಸ್ತಕ್ಷೇಪವಿರುವ ,ಕಾನೂನಿಗೆ ವಿರುದ್ಧವಾದ ವರ್ತನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ವಜಾಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್

ಅರ್ಜಿದಾರ ಎಸಿ ಮತ್ತು ತಹಶೀಲ್ದಾರ್‌ ತಮ್ಮ ಕಚೇರಿ ದುರುಪಯೋಗಪಡಿಸಿಕೊಂಡು ಆಸ್ತಿ ಸ್ವಾಧೀನ ಮತ್ತು ಮಾಲೀಕರು ಅಥವಾ ಬಾಡಿಗೆದಾರರ ವಶದಲ್ಲಿದ್ದ ನಿರ್ಮಿತಿಗಳು ಮತ್ತು ಕಟ್ಟಡಗಳನ್ನು ಕೆಡವಲು ಒಟ್ಟಿಗೆ ಯತ್ನಿಸಿದ್ದಾರೆ ಎಂದ ನ್ಯಾಯಾಲಯ ಸರ್ಕಾರದ ರಕ್ಷಣೆಯಿದೆ ಎಂಬ ಅಂಶವೇ ಇಂತಹ ಅಧಿಕಾರಿಗಳ ಧೈರ್ಯಕ್ಕೆ ಕಾರಣ ಎಂದು ಕಿಡಿಕಾರಿದೆ.

"ಉನ್ನತ ಹುದ್ದೆ ಪಡೆಯಲು ಅಧಿಕಾರಿಯೊಬ್ಬರು ಹಣ ನೀಡಿದರೆ ಆತ ನೀಡಿದ ಹಣವನ್ನು ಹಿಂಪಡೆಯಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಿಕೊಳ್ಳುತ್ತಾನೆ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಹಣ ಸಂಪಾದಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾನೆ. ಆದ್ದರಿಂದ, ಇದು ಭ್ರಷ್ಟಾಚಾರದ ಕೆಟ್ಟ ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ನ್ಯಾಯಾಲಯವು ವಾಸ್ತವಾಂಶ ಅರಿಯಲು ಹೆಜ್ಜೆ ಇಡಬೇಕಾದ ಸಮಯ ಬಂದಿದ್ದು ಭ್ರಷ್ಟ ಅಂಗಗಳು ಸಮಾಜದ ಕತ್ತು ಹಿಸುಕದಂತೆ ತಡೆಯಲು ನಿಯಮಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸುವ ಜೊತೆಗೆ ಮುಂದಿನ ಕ್ರಮಕ್ಕಾಗಿ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಕೂಡ ಆದೇಶದ ಪ್ರತಿಗಳನ್ನು ತಲುಪಿಸುವಂತೆ ಹೈಕೋರ್ಟ್‌ ರೆಜಿಸ್ಟ್ರಿಗೆ ಪೀಠ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com