ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿಸಿರುವ ಕ್ರಮವನ್ನು ವಿರೋಧಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ

ಮಗುವಿನ ಗುರುತು ಕೇವಲ ತಂದೆಯ ಮೇಲೆ ಮಾತ್ರವೇ ಅವಲಂಬಿತವಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮಗುವಿನ ಏಕಮಾತ್ರ ಪೋಷಕರಾದ ತಾಯಿ ಅರ್ಜಿ ಸಲ್ಲಿಸಿದ್ದಾರೆ.
Birth Certificate and Single Parent
Birth Certificate and Single Parent

ಜನನ ಮತ್ತು ಮರಣದ ನೋಂದಾವಣಿಯ ಕುರಿತಾದ ಪ್ರಮಾಣ ಪತ್ರಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕೆನ್ನುವ 'ಕೇರಳ ಜನನ ಮತ್ತು ಮರಣ ನಿಯಮಾವಳಿಗಳು - 1999' ಅನ್ನು ಪ್ರಶ್ನಿಸಿ ಮಗುವಿನ ನಿರೀಕ್ಷೆಯಲ್ಲಿರುವ ಏಕಮಾತ್ರ ಪೋಷಕರಾದ ತಾಯಿಯೊಬ್ಬರು ಕೇರಳ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಅರ್ಜಿದಾರೆ ಮಹಿಳೆಯು ಕೃತಕ ಗರ್ಭಧಾರಣೆಯ ಮೂಲಕ (ಐವಿಎಫ್‌ - ಇನ್‌ ವಿಟ್ರೋ ಫರ್ಟಿಲೈಸೇಷನ್) ಮುಖಾಂತರ ಗರ್ಭಧರಿಸಿದ್ದು ಪ್ರಸ್ತುತ ಎರಡನೇ ತ್ರೈಮಾಸಿಕ ಅವಧಿಯನ್ನು ಪೂರೈಸಿದ್ದಾರೆ. ಮಹಿಳೆಯು ಅನಾಮಿಕ ದಾನಿಯಿಂದ ಪಡೆಯಲಾದ ವೀರ್ಯದಿಂದ ಕೃತಕ ಗರ್ಭಧಾರಣೆಯ ಮೂಲಕ ಗರ್ಭಧರಿಸಿದ್ದು ದಾನಿ ವ್ಯಕ್ತಿಯ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ.

ಕೇರಳದ ಜನನ ಮತ್ತು ಮರಣ ನೋಂದಾವಣಿ ನಿಯಮಾವಳಿಗಳ ಪ್ರಕಾರ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲು ತಂದೆಯ ಹೆಸರನ್ನು ನೀಡುವುದು ಕಡ್ಡಾಯವಾಗಿದೆ. ಈ ನಿಯಮಾವಳಿಗಳನ್ನು ಆಕ್ಷೇಪಿಸಿ ಅರ್ಜಿದಾರ ಮಹಿಳೆಯು ವಕೀಲೆ ಅರುಣಾ ಜಿ ಅವರ ಮೂಲಕ ಅರ್ಜಿ ಸಲ್ಲಿಸಿದ್ದು, ಈ ನಿಯಮಾವಳಿಯು ಸಮಾನತೆಯ ಕುರಿತಾದ ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಗೋಪ್ಯತೆಯ/ಖಾಸಗಿತನದ ಹಕ್ಕಿನ ವಿರುದ್ಧವಾಗಿದೆ ಹಾಗೂ ಜನನ ಮತ್ತು ಮರಣ ನೋಂದಣಿ ಕಾಯಿದೆ- 1969ರ ವ್ಯಾಪ್ತಿಯ ಹೊರತಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೇರಳದ ಈ ನಿಯಮಾವಳಿಗಳು ಏಕಮಾತ್ರ ಪೋಷಕರಾಗಿರುವ (ಸಿಂಗಲ್‌ ಪೇರೆಂಟ್) ತಾಯಂದಿರಿಗೆ ತೀವ್ರ ಅನ್ಯಾಯ ಎಸಗುತ್ತವೆ. ಅನಾಮಿಕ ದಾನಿಗಳ ವೀರ್ಯದಿಂದ ಗರ್ಭಧರಿಸುವ ಅರ್ಜಿದಾರರ ರೀತಿಯ ವ್ಯಕ್ತಿಗಳು ತಂದೆಯ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ, ಈ ಪ್ರಮಾಣ ಪತ್ರಗಳಿಗೆ ಸಲ್ಲಿಸಬೇಕಾದ ಅರ್ಜಿಗಳಲ್ಲಿ ಕೇವಲ ತಂದೆಯ ಹೆಸರನ್ನು ಮಾತ್ರವೇ ಕೇಳಿರುವ ಕ್ರಮವು ಕಾನೂನುಬಾಹಿರವೂ, ಸ್ವೇಚ್ಛೆಯ ನಡೆಯೂ ಆಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮುಂದುವರೆದು, ಜನನ ಮತ್ತು ಮರಣ ಪ್ರಮಾಣಪತ್ರಗಳಲ್ಲಿ ತಾಯಿಯ ವಿವರಗಳನ್ನು ಉಲ್ಲೇಖಿಸದೆ ಇರುವುದು ಲಿಂಗಾಧಾರಿತವಾಗಿ ಮಾಡುವ ತಾರತಮ್ಯವಾಗಿದ್ದು ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಎಬಿಸಿ ವರ್ಸಸ್‌ ರಾಜ್ಯ ಸರ್ಕಾರ (ದೆಹಲಿ ಎನ್‌ಸಿಟಿ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಅವಲಂಬಿಸಿದ್ದಾರೆ. ಈ ತೀರ್ಪಿನ ಅನ್ವಯ ಏಕಮಾತ್ರ ಪೋಷಕರು/ಮದುವೆಯಾಗದ ತಾಯಿಯು ತನ್ನ ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೆ ಆಗ ಈ ಕುರಿತು ಮಾಹಿತಿ ನೀಡುವ ಅಫಿಡವಿಟ್‌ ಅನ್ನು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಸಾಕು. ಇದಕ್ಕೆ ವಿರುದ್ಧವಾದ ನ್ಯಾಯಾಲಯದ ಆದೇಶವಿಲ್ಲದ ಹೊರತು ಮೇಲಿನ ಅಫಿಡವಿಟ್‌ ಆಧಾರದಲ್ಲಿ ಜನನ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯ ಎಂದು ಸೂಚಿಸಲಾಗಿದೆ.

ಈ ತೀರ್ಪಿನ ಆಧಾರದಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್‌ ಜನರಲ್‌ ಅವರು ಸೂಚನೆಯೊಂದನ್ನು ಜುಲೈ 21, 2015ರಂದು ಹೊರಡಿಸಿದ್ದು, ಇದರಲ್ಲಿ ಮೇಲೆ ಹೇಳಿದಂತಹ ಪ್ರಕರಣದಲ್ಲಿ “ಮತ್ತೊಬ್ಬ ಪೋಷಕರ ಹೆಸರನ್ನು ಖಾಲಿ ಬಿಡಬೇಕು” ಎನ್ನಲಾಗಿದೆ. ಈ ಬಗ್ಗೆಯೂ ಅರ್ಜಿಯಲ್ಲಿ ಆಕ್ಷೇಪಣೆ ಎತ್ತಲಾಗಿದ್ದು ಸುಪ್ರೀಂ ಕೋರ್ಟ್‌ ಈ ಕುರಿತಾಗಿ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಕೇವಲ ಅಫಿಡವಿಟ್‌ ಸಲ್ಲಿಸಲು ಮಾತ್ರವೇ ಹೇಳಿದೆ. ಮತ್ತೊಬ್ಬ ಪೋಷಕರ ಹೆಸರನ್ನು ಖಾಲಿ ಬಿಡುವುದರಿಂದ ಮಗುವು ವಿವಾಹ ಬಂಧನದಿಂದ ಹೊರತಾಗಿ ಜನಿಸಿರುವುದು ಯಾರಿಗೇ ಆದರೂ ತಿಳಿಯುತ್ತದೆ. ಇದು ಅರ್ಜಿದಾರರ ಗೋಪ್ಯತೆಯ, ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಕೆ ಎಸ್‌ ಪುಟ್ಟಸ್ವಾಮಿ ವರ್ಸಸ್‌ ಭಾರತದ ಒಕ್ಕೂಟ (2017) ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್‌ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. “ಖಾಸಗಿತನವು ತನ್ನ ಆಂತರ್ಯದಲ್ಲಿ ವೈಯಕ್ತಿಕ ಆಪ್ತಸಂಬಂಧಗಳು, ಕೌಟುಂಬಿಕ ಪಾವಿತ್ರ್ಯತೆ, ಮದುವೆ, ಜೀವಸೃಷ್ಟಿ, ಗೃಹಸಂಬಂಧಿ ವಿಚಾರಗಳು ಹಾಗೂ ಲೈಂಗಿಕ ಮನೋಧರ್ಮಗಳನ್ನು ಒಳಗೊಳ್ಳುತ್ತದೆ. ಖಾಸಗಿತನವು ತಮ್ಮಪಾಡಿಗೆ ಇರಲಿಕ್ಕೆ ಬಿಡುವುದನ್ನೂ ಧ್ವನಿಸುತ್ತದೆ. ವೈಯಕ್ತಿಕ ಸ್ವಾಯತ್ತತೆಯನ್ನು ಖಾಸಗಿತನವು ರಕ್ಷಿಸುತ್ತದೆ. ಅಲ್ಲದೆ, ವ್ಯಕ್ತಿಯು ತನ್ನ ಜೀವನದ ವಿಶೇಷ ಸಂಗತಿಗಳ ಮೇಲೆ ನಿಯಂತ್ರಣ ಹೊಂದಿರುವ ಸಾಮರ್ಥ್ಯವನ್ನು ಗುರುತಿಸುತ್ತದೆ. ಜೀವನಶೈಲಿಯನ್ನು ನಿರ್ಧರಿಸುವ ವೈಯಕ್ತಿಕ ಆಯ್ಕೆಗಳು ಖಾಸಗಿತನದಲ್ಲಿ ಅಂತರ್ಗತವಾಗಿವೆ…” ಎಂದು ತೀರ್ಪಿನಲ್ಲಿ ಹೇಳಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿದಾರರ ಪ್ರಕಾರ, ಏಕಮಾತ್ರ ಪೋಷಕರಾಗುವ ಅವರ ನಿರ್ಧಾರ ವೈಯಕ್ತಿಕ ಆಯ್ಕೆಯಾಗಿದ್ದು, ಆಕೆ ಮತ್ತು ಆಕೆಯ ಮಗು ಖಾಸಗಿತನದ ಹಕ್ಕನ್ನು ಅನುಭವಿಸಲು ಅರ್ಹರಾಗಿದ್ದಾರೆ. ಹೀಗಾಗಿ, ಹೆಚ್ಚೆಂದರೆ ಅಧಿಕಾರಿಗಳು ಮಗುವು ಆಕೆಯ ಗರ್ಭದಿಂದಲೇ ಜನಿಸಿರುವುದು ಎನ್ನುವುದಕ್ಕೆ ಸೀಮಿತವಾಗಿ ಮಾತ್ರವೇ ದೃಢೀಕರಣ ಕೇಳಬೇಕು. ಇದಕ್ಕೆ, ತಾಯಿಯು ನೀಡುವ ಅಫಿಡವಿಟ್‌ ಸಾಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ, ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಉಲ್ಲೇಖಿಸುವುದನ್ನು ಕೈಬಿಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com