ವ್ಯಕ್ತಿ ಒಂದೇ ವೃಷಣ ಹೊಂದಿರುವುದು ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಅನರ್ಹತೆಯಾಗುವುದಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಭಾರತ ಒಕ್ಕೂಟ ಮತ್ತು ನೀರಜ್ ಮೋರ್ ನಡುವಣ ಪ್ರಕರಣ].
ಈ ಹಿನ್ನೆಲೆಯಲ್ಲಿ ಏಕ ವೃಷಣವಿದ್ದ ಅಭ್ಯರ್ಥಿಯನ್ನು ಅನರ್ಹಗೊಳಿಸಿರುವುದನ್ನು ತಡೆದು ಮತ್ತೆ ವೈದ್ಯಕೀಯ ಪರೀಕ್ಷೆಗೆ ನಿರ್ದೇಶಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಹಿಡಿಯಿತು.
ಏಕಸದಸ್ಯ ನ್ಯಾಯಾಧೀಶರ ಆದೇಶದಲ್ಲಿ ಯಾವುದೇ ಅನೌಚಿತ್ಯ ಕಂಡುಬಂದಿಲ್ಲ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ಎಸ್ ಸಂಧವಾಲಿಯಾ ಮತ್ತು ವಿಕಾಸ್ ಸೂರಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ಈ ರೀತಿಯ ಅಂಗವೈಕಲ್ಯ ಭಾರತೀಯ ನೌಕಾಪಡೆಗೆ ಸೇವೆ ಸಲ್ಲಿಸಲು ಅಡ್ಡಿಯಾಗುತ್ತದೆ ಎಂದು ತೋರಿಸುವ ಯಾವುದೇ ದಾಖಲೆಗಳಿಲ್ಲ” ಎಂದು ಅದು ಇದೇ ವೇಳೆ ನುಡಿಯಿತು. ಆ ಮೂಲಕ ಅಭ್ಯರ್ಥಿಯ ಅನರ್ಹತೆಯನ್ನು ಸಮರ್ಥಿಕೊಂಡಿದ್ದ ಕೇಂದ್ರ ಸರ್ಕಾರದ ಮನವಿ ವಜಾಗೊಳಿಸಿದ ನ್ಯಾಯಾಲಯ ಮೂರು ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ.