ಸದಸ್ಯರಲ್ಲದವರಿಗೂ ನಿವೇಶನ: ವೈಮಾನಿಕ ನೌಕರರ ಸಂಘದ ಅಧ್ಯಕ್ಷ, ನಿರ್ದೇಶಕರಿಗೆ 3 ತಿಂಗಳು ಶಿಕ್ಷೆ ವಿಧಿಸಿದ ಹೈಕೋರ್ಟ್‌

ಆರು ನಿರ್ದೇಶಕರಿಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ಎರಡು ಸಾವಿರ ರೂಪಾಯಿ ದಂಡವನ್ನು ಹೈಕೋರ್ಟ್‌ ವಿಧಿಸಿದೆ. ಒಂದೊಮ್ಮೆ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 15 ದಿನಗಳ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
Justices B Veerappa and M G Uma
Justices B Veerappa and M G Uma
Published on

ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿ ಸದಸ್ಯರಲ್ಲದ ವ್ಯಕ್ತಿಗಳಿಗೂ ನಿವೇಶನ ಹಂಚಿಕೆ ಮಾಡಿದ್ದ ಆರೋಪ ಸಂಬಂಧ ನಗರದ ವೈಮಾನಿಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಅಧ್ಯಕ್ಷರು ಹಾಗೂ ಆರು ಮಂದಿ ನಿರ್ದೇಶಕರಿಗೆ ತಲಾ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಸಂಘದ ಸದಸ್ಯರಾದ ಎಂ ಶಶಿಧರನ್ ಹಾಗೂ ವಿ ಮುನಿಯಪ್ಪ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಂ ಜಿ ಉಮಾ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.

ಸಂಘದ ಅಧ್ಯಕ್ಷ ಕೆ ಭೂಪಾಲ, ನಿರ್ದೇಶಕರಾದ ಎಸ್ ಎನ್ ಶಿವಮೂರ್ತಿ, ಸೋಮಣ್ಣ, ಎಸ್ ಸದಾಶಿವಪ್ಪ, ಕೆ ಸಿ ಸರಳ, ಡಿ ಶ್ರೀನಿವಾಸ್ ಹಾಗೂ ಸಿ ಎಚ್ ಶಂಕರ್ ಅವರನ್ನು ದೋಷಿಗಳು ಎಂದು ತೀರ್ಮಾನಿಸಿರುವ ಹೈಕೋರ್ಟ್, ಎಲ್ಲರಿಗೂ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ಎರಡು ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದೊಮ್ಮೆ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 15 ದಿನಗಳ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಹೈಕೋರ್ಟ್ ಏಕಸದಸ್ಯ ಪೀಠವು 2017ರಲ್ಲಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿ, ಎರಡು ನಿವೇಶನಗಳನ್ನು ಸೊಸೈಟಿಯ ಸದಸ್ಯರಲ್ಲದ ಮೂರನೇ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ. ಪ್ರಕರಣದ ಏಳೂ ಆರೋಪಿಗಳ ವಿರುದ್ಧದ ಆರೋಪಗಳು ಸಂಶಯಾತೀತವಾಗಿ ಸಾಬೀತಾಗಿವೆ. ಹೀಗಾಗಿ, ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಸಂಘದ ಸದಸ್ಯರಿಗೆ ಮನೆ ನಿರ್ಮಿಸಲು ಅನುಕೂಲವಾಗುವಂತೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಜಮೀನು ವಶಪಡಿಸಿಕೊಂಡು ಅಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಆದರೆ, ಸಂಘ ಮತ್ತು ಸದಸ್ಯರ ನಡುವೆ ವಿವಾದ ಉಂಟಾಗಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಏಕ ಸದಸ್ಯ ಪೀಠವು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸಹಕಾರ ಇಲಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಜಂಟಿ ನಿರ್ದೇಶಕರು, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ 11 ಆರೋಪ ಹೊರಿಸಿ 2012ರಲ್ಲಿ ವರದಿ ಸಲ್ಲಿಸಿದ್ದರು.

ತದನಂತರ ಸೊಸೈಟಿಯ ಕಾರ್ಯಕಾರಿ ಸಮಿತಿಗೆ ಜಂಟಿ ನಿರ್ದೇಶಕರು ಹಿರಿಯ ಸದಸ್ಯರ ಪಟ್ಟಿ (ಜೇಷ್ಠತಾ) ಸಿದ್ಧಪಡಿಸಬೇಕು. ಆ ಪಟ್ಟಿಯು ಸರ್ಕಾರದಿಂದ ಅನುಮೋದನೆ ಪಡೆಯುವವರೆಗೂ ನಿವೇಶನ ಹಂಚಿಕೆಗಾಗಿ ಸದಸ್ಯರು ಸಲ್ಲಿಸಿದ ಯಾವುದೇ ಮನವಿ ಪರಿಗಣಿಸಬಾರದು ಎಂದು 2013ರ ಏಪ್ರಿಲ್‌ನಲ್ಲಿ ನಿರ್ದೇಶಿಸಿದ್ದರು.

ಜಂಟಿ ನಿರ್ದೇಶಕರ ನಿರ್ದೇಶನಗಳನ್ನು ಸೊಸೈಟಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿ ಸೊಸೈಟಿಯ ಸದಸ್ಯರು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅನುಮೋದಿಸಿದ ಸದಸ್ಯರ ಜೇಷ್ಠತಾ ಪಟ್ಟಿ ಅನುಸರಿಸದೆಯೇ ಯಾವುದೇ ನಿವೇಶನ ಹಂಚಿಕೆ ಮಾಡಬಾರದು ಮತ್ತು ಮಾರಾಟ ಕ್ರಯ ಮಾಡಿಕೊಡಬಾರದು ಎಂದು 2017ರ ಆಗಸ್ಟ್‌ 7ರಂದು ಮಧ್ಯಂತರ ಆದೇಶ ಮಾಡಿತ್ತು.

ಈ ಮಧ್ಯೆ, 2020ರಲ್ಲಿ ಸೊಸೈಟಿಯ ಸದಸ್ಯರಾದ ಎಂ ಶಶಿಧರನ್ ಮತ್ತು ವಿ ಮುನಿಯಪ್ಪ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ, ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಿಂದ ಸದಸ್ಯರ ಜೇಷ್ಠತಾ ಪಟ್ಟಿಗೆ ಅನುಮೋದನೆ ಪಡೆಯದೆ ಸೊಸೈಟಿಯು ಸದಸ್ಯರಲ್ಲದ ಮೂರನೇ ವ್ಯಕ್ತಿಗಳಿಗೆ 2020ರ ಮಾರ್ಚ್‌ 3ರಂದು ಎರಡು ನಿವೇಶನ ಮಾರಾಟ ಮಾಡಿ ಕ್ರಯ ಮಾಡಿಕೊಟ್ಟಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ಏಕ ಸದಸ್ಯ ಪೀಠದ ಆದೇಶ ಉಲ್ಲಂಘಿಸಿದ್ದು, ಸಂಬಂಧಪಟ್ಟ ಅರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.

Kannada Bar & Bench
kannada.barandbench.com