ನಿಮ್ಮ ಪರಿಸ್ಥಿತಿ ಸರ್ಕಾರಿ ಇಲಾಖೆಗಿಂತ ಕೆಟ್ಟದ್ದಾಗಿದೆ: ಮೆಟಾಗೆ ದೆಹಲಿ ಹೈಕೋರ್ಟ್ ತರಾಟೆ

ಮೆಟಾ ವ್ಯವಸ್ಥಿತವಾಗದೇ ಹೋದಲ್ಲಿ ನ್ಯಾಯಾಲಯ ಅದನ್ನು ಖಂಡಿಸುವಂತಹ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಹೈಕೋರ್ಟ್.
ನಿಮ್ಮ ಪರಿಸ್ಥಿತಿ ಸರ್ಕಾರಿ ಇಲಾಖೆಗಿಂತ ಕೆಟ್ಟದ್ದಾಗಿದೆ: ಮೆಟಾಗೆ ದೆಹಲಿ ಹೈಕೋರ್ಟ್ ತರಾಟೆ

ಟಿವಿ ಟುಡೇ ಒಡೆತನದ ಇನ್‌ಸ್ಟಾಗ್ರಾಮ್ ಪುಟ, ಹಾರ್ಪರ್ಸ್ ಬಜಾರ್ ಇಂಡಿಯಾ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಟಿವಿ ಟುಡೆಯ ಮನವಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸದ ಇನ್‌ಸ್ಟಾಗ್ರಾಮ್‌ ಒಡೆತನ ಹೊಂದಿರುವ 'ಮೆಟಾ'ವನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತರಾಟೆ ತೆಗೆದುಕೊಂಡಿದೆ. ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಂನಂತಹ ಅಪ್ಲಿಕೇಷನ್‌ಗಳ ಮಾಲೀಕತ್ವವನ್ನು ಟೆಕ್‌ ದೈತ್ಯ ʼಮೆಟಾʼ ಹೊಂದಿದೆ.

ಮೆಟಾದ ಕಾರ್ಯನಿರ್ವಹಣೆ ಸರ್ಕಾರಿ ಇಲಾಖೆಗಿಂತ ಕೆಟ್ಟದಾಗಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಟೀಕಿಸಿದೆ.

“ನಿಮ್ಮ ಪರಿಸ್ಥಿತಿ ಸರ್ಕಾರಿ ಇಲಾಖೆಗಿಂತ ಕೆಟ್ಟದಾಗಿದೆ. ದಯವಿಟ್ಟು ಎಚ್ಚರದಿಂದಿರಿ. ನೀವು ಪರಿಸ್ಥಿತಿ ಬಗ್ಗೆ ನಿಗಾವಹಿಸಬೇಕು. ನಿಮ್ಮ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿಲ್ಲ. ನಿಮ್ಮ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ. ಅದು ಕೆಲಸ ಮಾಡಬೇಕು, ”ಎಂದು ನ್ಯಾಯಾಲಯ ಬುದ್ಧಿವಾದ ಹೇಳಿದೆ.

ಮೆಟಾ ವ್ಯವಸ್ಥಿತವಾಗದೇ ಹೋದಲ್ಲಿ ನ್ಯಾಯಾಲಯ ಅದನ್ನು ಖಂಡಿಸುವಂತಹ ಆದೇಶ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂಬ ಮೂರನೇ ವ್ಯಕ್ತಿಯ ದೂರಿನ ಮೇರೆಗೆ ಹಾರ್ಪರ್ಸ್ ಬಜಾರ್ ಇಂಡಿಯಾದ ಇನ್‌ಸ್ಟಾಗ್ರಾಮ್ ಪುಟವನ್ನು (@bazaarindia) ನಿರ್ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಟಿವಿ ಟುಡೇ ಮನವಿಗೆ ಸಂಬಂಧಿಸಿದಂತೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನ ಪುಟವನ್ನು ನಿರ್ಬಂಧಿಸಿರುವುದು ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆದಾರರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರ ನಿಯಮ 3 (1) (ಸಿ)ಯ ಸಾಂವಿಧಾನಿಕತೆಯನ್ನು ಪ್ರಶ್ನಿಸಲು ಕಾರಣವಾಗಿದೆ ಎಂದು ಟಿವಿ ಟುಡೆ ದೂರಿತ್ತು.

ಮೂರು ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಗಳ ಬಳಿಕ  ಹಾರ್ಪರ್ಸ್ ಬಜಾರ್‌ನ ಇನ್‌ಸ್ಟಾಗ್ರಾಮ್ ಪುಟವನ್ನು ನಿರ್ಬಂಧಿಸಲಾಗಿದೆ. ತನಗೆ ಸಾಕಷ್ಟು ಸಂಖ್ಯೆಯ ವಿನಂತಿಗಳು ಈ ರೀತಿ ಬರುತ್ತವೆ ಎಂದು ಮೆಟಾ ವಾದಿಸಿತು.

ಮೆಟಾಗೆ ಲಕ್ಷಾಂತರ ಬಳಕೆದಾರರು ಇದ್ದಾರೆ ಎಂದ ಮಾತ್ರಕ್ಕೆ ಅದು ತನ್ನ ವ್ಯವಸ್ಥೆಯನ್ನು ಒಪ್ಪವಾಗಿ ಇರಿಸಿಕೊಳ್ಳಬಾರದು ಎಂದೇನೂ ಅಲ್ಲ ಎಂದು ಪೀಠ ಹೇಳಿತು. ಪ್ರತಿಕ್ರಿಯಿಸಲು ಒಂದು ದಿನದ ಮಟ್ಟಿಗಾದರೂ ಸಮಯಾವಕಾಶ ಬೇಕು ಎಂದು ಮೆಟಾ ಕೋರಿದಾಗ ಅದನ್ನುಪುರಸ್ಕರಿಸಿದ ನ್ಯಾಯಾಲಯ ಪ್ರಕರಣವನ್ನು ನಾಳೆಗೆ (ಬುಧವಾರಕ್ಕೆ) ಮುಂದೂಡಿತು.

Related Stories

No stories found.
Kannada Bar & Bench
kannada.barandbench.com