Seven judges constitution bench of supreme court
Seven judges constitution bench of supreme court

ಒಳ ಮೀಸಲಾತಿ, ಹಣಕಾಸು ಮಸೂದೆ ಸೇರಿ ಇಂದು ಆರು ಪ್ರಕರಣಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ

ಪ್ರಕರಣಗಳನ್ನು ಅಂತಿಮ ವಿಚಾರಣೆಗೆ ಪಟ್ಟಿ ಮಾಡದೆ ಕಾರ್ಯವಿಧಾನದ ನಿರ್ದೇಶನಗಳಿಗಾಗಿ ಮಾತ್ರ ಇಂದು ವಿಚಾರಣೆ ನಡೆಸಲಾಗುತ್ತಿದೆ.

ಒಳಮೀಸಲಾತಿ, ನಬಮ್‌ ರೆಬಿಯಾ, ಹಣಕಾಸು ಮಸೂದೆ ಸೇರಿದಂತೆ ಆರು ಮಹತ್ವದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇಂದು ವಿಚಾರಣೆ ನಡೆಸಲಿದೆ.

ಆದರೆ ಪ್ರಕರಣಗಳನ್ನು ಅಂತಿಮ ವಿಚಾರಣೆಗೆ ಪಟ್ಟಿ ಮಾಡದೆ ವಿಚಾರಣಾ ಪ್ರಕ್ರಿಯಾ ನಿರ್ದೇಶನಗಳಿಗಾಗಿ ಮಾತ್ರ ಇಂದು ಕೈಗೆತ್ತಿಕೊಳ್ಳಲಾಗುವುದು. ಆ ಆರು ಪ್ರಕರಣಗಳ ವಿವರ ಇಂತಿದೆ.

ಒಳಮೀಸಲಾತಿ

ಪಂಜಾಬ್ ಸರ್ಕಾರ ಮತ್ತಿತರರು ಹಾಗೂ ದೇವಿಂದರ್ ಸಿಂಗ್ ಇನ್ನಿತರರ ನಡುವಣ ಪ್ರಕರಣ

ಪ್ರಶ್ನೆ: ಇ.ವಿ.ಚಿನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣದ ತೀರ್ಪಿನ ಸೂಕ್ತತೆ ಮರುಪರಿಶೀಲನೆ

ಪಂಜಾಬ್ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ, 2006 ರ ಸೆಕ್ಷನ್ 4(5) ಅನ್ನು ಅಸಂವಿಧಾನಿಕ ಎಂದು ತಿಳಿಸಿ 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿದಾಗ ಹುಟ್ಟಿಕೊಂಡ ಪ್ರಕರಣ ಇದು. ಸಾರ್ವಜನಿಕ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಗಾಗಿ ವಾಲ್ಮೀಕಿ ಮತ್ತು ಮಜ್ಭಿ ಸಿಖ್ ಜಾತಿಗಳಿಗೆ 'ಪ್ರಥಮ ಪ್ರಾಶಸ್ತ್ಯ'ವನ್ನು ಕಾಯಿದೆಯ 4(5)ನೇ ಸೆಕ್ಷನ್‌ ಒದಗಿಸುತ್ತಿತ್ತು.

ಆದೇಶ ನೀಡಲು ಹೈಕೋರ್ಟ್‌ ಪಾಲಿಸಿದ್ದ ಇವಿ ಚಿನ್ನಯ್ಯ ಪ್ರಕರಣದ ತೀರ್ಪು ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ವಾದಿಸಿ ಪಂಜಾಬ್‌ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಪರಿಶಿಷ್ಟ ಜಾತಿಗಳ ಯಾವುದೇ 'ಉಪ-ವರ್ಗೀಕರಣ' (ಒಳಮೀಸಲಾತಿ) ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಇ ವಿ ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಸಂವಿಧಾನದ 341ನೇ ವಿಧಿಯಡಿ  ರಾಷ್ಟ್ರಪತಿ ಪಟ್ಟಿಯಿಂದ ಪರಿಶಿಷ್ಟ ಜಾತಿಗಳೆಂದು ಪರಿಗಣಿಸಲಾದ ಜಾತಿಗಳನ್ನು ಹೊರಗಿಡಲು ಸಂಸತ್ತಿಗೆ ಮಾತ್ರ ಅಧಿಕಾರ ಇದೆಯೇ ಹೊರತು ರಾಜ್ಯ ಶಾಸಕಾಂಗಗಳಿಗೆ ಅಲ್ಲ ಎಂದು ಅದು ಹೇಳಿದೆ.

ಹಣಕಾಸು ಮಸೂದೆ

ರೋಜರ್ ಮ್ಯಾಥ್ಯೂ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್‌ ನಡುವಣ ಪ್ರಕರಣ

ಪ್ರಶ್ನೆ: ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದನ್ನು ತಪ್ಪಿಸುವುದಕ್ಕಾಗಿ ಹಣಕಾಸು ಮಸೂದೆಗಳಾಗಿ ವಿವಿಧ ಕಾಯಿದೆಗಳನ್ನು ಜಾರಿಗೆ ತರಬಹುದೇ ಎಂಬುದು.

1994ರ ಹಣಕಾಸು ಕಾಯಿದೆಗೆ ಕೆಲ ತಿದ್ದುಪಡಿ ಮಾಡಿ ಮಂಡಿಸಲಾದ ಹಣಕಾಸು ಕಾಯಿದೆ, 2017ನ್ನು ಸಂವಿಧಾನದ 110ನೇ ವಿಧಿಯಡಿ  ಹಣಕಾಸು ಮಸೂದೆ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರಕರಣ ವ್ಯವಹರಿಸುತ್ತದೆ.

ಹಣಕಾಸು ಕಾಯಿದೆ- 2017 ರ ಮೂಲಕ ಮಾಡಲಾದ ತಿದ್ದುಪಡಿಗಳು ಹಣಕಾಸು ಮಸೂದೆ ವ್ಯಾಪ್ತಿಯಲ್ಲಿವೆಯೇ ಮತ್ತು ಮಸೂದೆ ಅಂಗೀಕರಿಸುವಾಗ ಅನುಸರಿಸಲಾದ ಕಾರ್ಯವಿಧಾನಗಳು ಸಿಂಧುವೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ.

ನವೆಂಬರ್ 2019 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಹಣಕಾಸು ಕಾಯಿದೆ 2017 ಅನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸುವ ಸಿಂಧುತ್ವವನ್ನು ವಿಸೃತ ಪೀಠ ನಿರ್ಧರಿಸಬೇಕು ಎಂದು ಆದೇಶಿಸಿತ್ತು.

ನ್ಯಾಯಮಂಡಳಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಯೋಜನೆಗಳನ್ನು ಪರಿಷ್ಕೃತ ಹಣಕಾಸು ಕಾಯಿದೆ- 2017 ಗೆ ಸವಾಲಿನ ಕುರಿತಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಆ ಸಂದರ್ಭದಲ್ಲಿ, ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆ ನೀಡಿದ ಎಲ್ಲಾ ಸಲಹೆಗಳನ್ನು ಬದಿಗೊತ್ತಿ ಏಪ್ರಿಲ್ 1, 2017ರಂದು ಕಾಯಿದೆ ಜಾರಿಗೆ ಬಂದಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು ಹಣಕಾಸು ಮಸೂದೆ ರೂಪದಲ್ಲಿ ಕಾಯಿದೆಗಳನ್ನು ಅಂಗೀಕರಿಸುವುದು ಸಂಪೂರ್ಣ ಅನುಚಿತವಾಗಿದ್ದು ಸಂವಿಧಾನಕ್ಕೆ ಎಸಗಿದ ವಂಚನೆ ಎಂದು ವಾದಿಸಲಾಗಿದೆ.

ಇದಕ್ಕೂ ಹಿಂದಿನ ತೀರ್ಪಿನಲ್ಲಿ ಆಧಾರ್‌ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿತ್ತು. ಈ ತೀರ್ಪು ಐವರು ನ್ಯಾಯಮೂರ್ತಿಗಳ ಪೀಠದಿಂದ ಬಂದಿದ್ದರಿಂದ, ಸುಪ್ರೀಂ ಕೋರ್ಟ್ ತನ್ನ 2019ರ ತೀರ್ಪಿನಲ್ಲಿ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ಉಲ್ಲೇಖಿಸಲು ನಿರ್ಧರಿಸಿತು.

ಕುತೂಹಲಕಾರಿ ಸಂಗತಿಯೆಂದರೆ, ಆಗ ಸುಪ್ರೀಂ ಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಹಾಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಆಧಾರ್ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದರು. ಆಧಾರ್ ಕಾಯಿದೆಯನ್ನು ಹಣಕಾಸು ಮಸೂದೆ ರೂಪದಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ನಬಮ್‌ ರೆಬಿಯಾ ಪ್ರಕರಣ

ಸುಭಾಷ್ ದೇಸಾಯಿ ಮತ್ತು ಮಹಾರಾಷ್ಟ್ರ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ನಡುವಣ ಪ್ರಕರಣ

ಪ್ರಶ್ನೆ: ನಬಮ್ ರೆಬಿಯಾ ತೀರ್ಪಿನಲ್ಲಿ ಸ್ಪೀಕರ್‌ಗೆ ನೀಡಲಾದ ಅಧಿಕಾರವನ್ನು ಮರುಪರಿಶೀಲಿಸುವುದು.

ವಿಸ್ತೃತ ಪೀಠದೆದುರು ಇರುವ ಮೂಲಭೂತ ಪ್ರಶ್ನೆ ಎಂದರೆ ಸ್ಪೀಕರ್‌ ಪದಚ್ಯುತಿಗೆ ನಿರ್ಣಯ ಮಂಡಿಸುವ ಸೂಚನೆ ನೀಡಿರುವಾಗ ಸಂವಿಧಾನದ ಹತ್ತನೇ ಶೆಡ್ಯೂಲ್‌ನಡಿ ಅನರ್ಹತೆ ಅರ್ಜಿಗಳ ಕುರಿತು ನಿರ್ಣಯ ಕೈಗೊಳ್ಳದಂತೆ ಸ್ಪೀಕರ್‌ ಅವರನ್ನು ನಿರ್ಬಂಧಿಸುತ್ತದೆಯೇ ಎಂಬುದಾಗಿದೆ.

ಸ್ಪೀಕರ್‌ ಅವರ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತತೆಯನ್ನು ಅನುಮಾನಿಸಲು ಯಾವುದೇ ಕಾರಣ ಇಲ್ಲ ಎಂದು 1992 ರಲ್ಲಿ ನೀಡಲಾದ ಕಿಹೋಟೊ ಹೊಲೊಹಾನ್ ಪ್ರಕರಣ ತೀರ್ಪು ಉಲ್ಲೇಖಿಸಿದ್ದರಿಂದ ಮೂಲಭೂತವಾಗಿ ಈ ಉಲ್ಲೇಖ ಮಾಡಲಾಗಿದೆ. ಆದರೂ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ಉದ್ದೇಶದ ನೋಟಿಸ್ ನೀಡಿದ ನಂತರ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಾಗ ಸ್ಪೀಕರ್ ತಟಸ್ಥರಾಗಿ ಉಳಿಯುವ ಬಗ್ಗೆ ನಬಮ್ ರೆಬಿಯಾ ಪ್ರಕರಣ ಅನುಮಾನ ವ್ಯಕ್ತಪಡಿಸಿದೆ.

ಈ ಪ್ರಕಣಗಳಷ್ಟೇ ಅಲ್ಲದೆ, ಪಾವತಿಸಬೇಕಾದ ಮಾರಾಟ ತೆರಿಗೆಯ ಒಟ್ಟು ಮೊತ್ತದ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದೇ ಎಂಬ ಕುರಿತಾಗಿ ಅರ್ಜುನ್ ಹಿಟ್ಟಿನ ಗಿರಣಿ ಮತ್ತು ಒಡಿಶಾ ಸರ್ಕಾರ ನಡುವಣ ಪ್ರಕರಣ; ಮೂಲಭೂತ ಹಕ್ಕುಗಳು ಸಂಸದೀಯ ಸವಲತ್ತುಗಳನ್ನು ಅತಿಕ್ರಮಿಸಬಹುದೇ ಎಂಬ ಪ್ರಶ್ನೆಯುಳ್ಳ ಎನ್ ರವಿ ಮತ್ತಿತರರು ಹಾಗೂ ತಮಿಳುನಾಡು ವಿಧಾನಸಭೆ ಸ್ಪೀಕರ್‌ ನಡುವಣ ಪ್ರಕರಣ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಾದ ರಿಜಿಸ್ಟ್ರಾರ್ ಫೈಜಾನ್ ಮುಸ್ತಫಾ ಅವರ ಮೂಲಕ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ನರೇಶ್‌ ಅಗರ್‌ವಾಲ್‌ ಇನ್ನಿತರರ ನಡುವಣ ಪ್ರಕರಣಗಳ ವಿಚಾರಣೆ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com