
“ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಸಂಪೂರ್ಣ ಕಾನೂನು ಬಾಹಿರವಾಗಿದೆ” ಎಂದು ಆರೋಪಿಸಿ ಇಂಧನ ಸಚಿವ ಕೆ ಜೆ ಜಾರ್ಜ್ ವಿರುದ್ಧ ದಾಖಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ಪ್ರಾಥಮಿಕ ತನಿಖಾ ವರದಿ ತರಿಸಿ, ಪರಿಶೀಲಿಸಿದ ಬಳಿಕ ಮುಂದುವರಿಯುವ ಕುರಿತಾದ ಆದೇಶವನ್ನು ಜನಪ್ರತಿನಿಧಿಗಳ ನ್ಯಾಯಾಲಯವು ಜುಲೈ 21ಕ್ಕೆ ಪ್ರಕಟಿಸಲಿದೆ.
“ಟೆಂಡರ್ ನೀಡಿಕೆಯಿಂದ ಅಂದಾಜು ₹16 ಸಾವಿರ ಕೋಟಿ ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ” ಎಂದು ಆರೋಪಿಸಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಅಧ್ಯಕ್ಷರೂ ಆದ ಇಂಧನ ಸಚಿವ ಕೆ ಜೆ ಜಾರ್ಜ್ ಮತ್ತಿತರರ ವಿರುದ್ಧ ಬಿಜೆಪಿಯ ಶಾಸಕ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹಾಗೂ ಇತರರು ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಗುರುವಾರ ನಡೆಸಿದರು.
ಫಿರ್ಯಾದುದಾರ ಬಿಜೆಪಿಯ ಶಾಸಕರುಗಳಾದ ಡಾ.ಸಿ ಎನ್ ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಪರವಾಗಿ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಅವರು “ನಾವು ಸ್ಮಾರ್ಟ್ ಮೀಟರ್ ಅಳವಡಿಕೆ ಬೇಡ ಎಂದು ಹೇಳುತ್ತಿಲ್ಲ. ಆದರೆ, ಇದರ ಸಂಪೂರ್ಣ ಟೆಂಡರ್ ಪ್ರಕ್ರಿಯೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಇಲ್ಲ” ಎಂದು ಆಕ್ಷೇಪಿಸಿದರು.
“ಈ ಪ್ರಕರಣದಲ್ಲಿ ಸಚಿವ ಕೆ ಜೆ ಜಾರ್ಜ್ ನೇರ ಫಲಾನುಭವಿಯಾಗಿದ್ದಾರೆ. ಕಪ್ಪು ಪಟ್ಟಿಯಲ್ಲಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಗುತ್ತಿಗೆ ನೀಡಲಾಗಿದೆ. ವಿರೋಧಾಭಾಸ ಎಂದರೆ ಇಡೀ ಟೆಂಡರ್ ಪ್ರಕ್ರಿಯೆ ಅಸಂಗತ ಲೆಕ್ಕಾಚಾರಗಳಿಂದ ಕೂಡಿದೆ. ಬೆಸ್ಕಾಂ ಅನ್ನು ನೆಪಮಾತ್ರಕ್ಕೆ ಕೇಂದ್ರವಾಗಿಸಿಕೊಂಡು ಗ್ರಾಹಕರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ದೋಚುವ ಕ್ರಿಮಿನಲ್ ಸಂಚು ಇದರ ಹಿಂದಿದೆ” ಎಂದು ಆಪಾದಿಸಿದರು.
ಸುದೀರ್ಘ ವಾದ ಆಲಿಸಿದ ನ್ಯಾಯಾಲಯವು “ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯ ವರದಿಯನ್ನು ಪರಿಶೀಲಿಸಲಾಗುವುದು. ತದನಂತರ ಮುಂದಿನ ನ್ಯಾಯಿಕ ಪ್ರಕ್ರಿಯೆಯನ್ನು ನಿರ್ಣಯಿಸಲಾಗುವುದು” ಎಂದು ತಿಳಿಸಿ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿತು.
ದೂರಿನಲ್ಲಿ ಸಚಿವ ಕೆ ಜೆ ಜಾರ್ಜ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್ ಜೆ ರಮೇಶ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಫಿರ್ಯಾದುದಾರ ಪೈಕಿ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮತ್ತು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದರು.
ದೂರಿನಲ್ಲಿ ಏನಿದೆ: ಸ್ಮಾರ್ಟ್ ಮೀಟರ್ ಸೇವೆ ಒದಗಿಸುವ ನಿಟ್ಟಿನಲ್ಲಿ 2024ರ ಸೆಪ್ಟೆಂಬರ್ 26ರಂದು ಟೆಂಡರ್ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಎಂಬ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ಟೆಂಡರ್ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್ ಕರೆಯದೆ ಬೆಸ್ಕಾಂ ಕಂಪನಿಯೊಂದಕ್ಕೇ ನೇರವಾಗಿ ನೀಡಲಾಗಿದೆ. ಈ ಕಾನೂನು ಬಾಹಿರವಾದ ಒಟ್ಟು ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕೆಇಆರ್‌ಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್ 314,316 ಮತ್ತು 61 ಹಾಗೂ ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯಿದೆ–2018ರ ಸೆಕ್ಷನ್ 13(1) ಎ ಮತ್ತು 13(1) ಬಿ ಅನ್ವಯ ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಫ್‌ಐಆರ್ ದಾಖಲಿಸಲು ಆದೇಶಿಸಬೇಕು ಎಂದು ಕೋರಿದ್ದಾರೆ.