ದೃಷ್ಟಿಹೀನರು, ಅಂಗವಿಕಲರ ಸುಗಮ ಸಂಚಾರ: ಸುರಕ್ಷಾ ಕ್ರಮ ಒಳಗೊಂಡ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅರ್ಜಿದಾರರ ಮನವಿ ಅತ್ಯಂತ ಗಂಭೀರವಾಗಿದ್ದರೂ ಈವರೆಗೂ ಸರ್ಕಾರ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಪೀಠ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿತು.
KSRTC
KSRTC

ರಾಜ್ಯದಲ್ಲಿ ದೃಷ್ಟಿಹೀನರೂ ಸೇರಿದಂತೆ ಅಂಗವಿಕಲರ ಸುಗಮ ಸಂಚಾರಕ್ಕೆ ದೇಶಕ್ಕೆ ಮಾದರಿಯಾಗುವಂತಹ ಸುರಕ್ಷತಾ ಕ್ರಮಗಳನ್ನು ಒಳಗೊಂಡ ಯೋಜನೆ ಜಾರಿಗೆ ಸಲಹೆಗಳೊಂದಿಗೆ ಮಾಹಿತಿ ನೀಡಲು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ಅಂಗವಿಕಲರಿಗೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರಿನ ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ ಮತ್ತು ಅಂಗವಿಕಲರೂ ಆಗಿರುವ ಎನ್ ಶ್ರೇಯಸ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

2022ರ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಆಗಸ್ಟ್ 3ರಂದು ನೋಟಿಸ್ ನೀಡಲಾಗಿದೆ. ಆದರೆ, ಅರ್ಜಿದಾರರ ಮನವಿ ಅತ್ಯಂತ ಗಂಭೀರವಾಗಿದ್ದರೂ ಈವರೆಗೂ ಸರ್ಕಾರ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಪೀಠ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿತು.

ಅರ್ಜಿದಾರರು ಎತ್ತಿರುವ ವಿಚಾರ ಅತ್ಯಂತ ಗಂಭೀರವಾಗಿವೆ. ಸುಪ್ರೀಂ ಕೋರ್ಟ್ ಹಾಗೂ ಹಲವು ಹೈಕೋರ್ಟ್‌ಗಳು ಅಂಗವಿಕಲರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಿವೆ. ಆದ್ದರಿಂದ, ಈ ಕುರಿತು ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮವನ್ನು ಸರ್ಕಾರ ವಹಿಸಬೇಕು ಎಂದು ನ್ಯಾಯಾಲಯ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರ ಅಂಗವಿಕಲ ಶ್ರೇಯಸ್ ಅವರು, ಓಲಾ, ಉಬರ್ ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾರ್ಗದ ವಿವರವನ್ನು ಧ್ವನಿಯ ಮೂಲಕ ಕೇಳಿಸಿಕೊಳ್ಳಬಹುದಾಗಿದೆ. ಜೊತೆಗೆ, ಯಾವುದೇ ರೀತಿಯ ತೊಂದರೆಗೆ ಸಿಲುಕಿದಲ್ಲಿ ತಕ್ಷಣ ಸಂಬಂಧಿಕರನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ಸೌಲಭ್ಯ ಕಲ್ಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿದರು.

ಬಸ್‌ಗಳಲ್ಲಿ ಅಂಗವಿಲಕರು ಬಂದ ಸಂದರ್ಭದಲ್ಲಿ ನಿರ್ವಾಹಕರು ಹೆಚ್ಚು ಗಮನ ಹರಿಸಿ ಕೂರಿಸುವುದು, ಬಸ್‌ನಿಂದ ಇಳಿಯುವ ಸಂದರ್ಭದಲ್ಲಿ ನೆರವಾಗುತ್ತಾರೆ. ಆದರೆ, ಜನ ದಟ್ಟಣೆ ಹೆಚ್ಚಾಗಿರುವ ಸಂದರ್ಭಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಂಗವಿಕಲರಿಗೆ ನೆರವಾಗುವಂತಹ ಕ್ರಮಗಳನ್ನು ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈ ರೀತಿಯ ಕ್ರಮವಹಿಸಲಾಗಿದೆ. ಆದರೆ, ರಾಜ್ಯದಲ್ಲಿ ಈವರೆಗೂ ಅಂಗವಿಕಲರಿಗೆ ಯಾವುದೇ ಸುರಕ್ಷತಾ ಕ್ರಮ ಇಲ್ಲವಾಗಿವೆ. ಆದ್ದರಿಂದ, ಸೂಕ್ತ ನಿರ್ದೇಶನ ನೀಡಬೇಕು ಎಂದು ಪೀಠವನ್ನು ಕೋರಿದರು.

Kannada Bar & Bench
kannada.barandbench.com