
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪಿಸಿರುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಸೂಚನೆ ಪಡೆದು ವಾದಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರ ಪರ ವಕೀಲರು ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ ಸೇರಿ ಐವರ ವಿರುದ್ಧ ಮೈಸೂರಿನ ಸ್ನೇಹಮಯಿ ಕೃಷ್ಣ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ನಡೆಸಿದರು.
ದೂರುದಾರ ಸ್ನೇಹಮಯಿ ಕೃಷ್ಣ ಅವರು “ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಭಾವ ಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನಿನ ಮಾಲೀಕ ಎನ್ನಲಾದ ಜೆ ದೇವರಾಜು ಅವರ ವಿರುದ್ಧ ಯಾವುದೇ ಆಕ್ಷೇಪಾರ್ಹವಾದ ದಾಖಲೆಗಳು ಇಲ್ಲ ಎಂದು ಲೋಕಾಯುಕ್ತ ತನಿಖಾಧಿಕಾರಿ ಅಂತಿಮ ವರದಿಯಲ್ಲಿ ತಿಳಿಸಿದ್ದಾರೆ. ಇನ್ನೊಂದು ಕಡೆ ಅದೇ ವರದಿಯಲ್ಲಿ ಪಾರ್ವತಿ ಮತ್ತು ಇತರರಿಗೆ 50:50 ಅನುಪಾತದಲ್ಲಿ ಅಂದಿನ ಮುಡಾ ಆಯುಕ್ತ ಡಿ ಬಿ ನಟೇಶ್ ಅವರು 14 ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿರುವುದರಿಂದ ಮುಡಾಗೆ ನಷ್ಟವಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯಲ್ಲಿ ಸ್ಪಷ್ಟತೆ ಇಲ್ಲ” ಎಂದರು.
ಇದಕ್ಕೆ ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರು “ಈ ಸಂಬಂಧ ತನಿಖಾಧಿಕಾರಿಯಿಂದ ಅಗತ್ಯ ಸೂಚನೆ ಪಡೆದು ವಾದಿಸಲಾಗುವುದು” ಎಂದರು.
ಇದಕ್ಕೂ ಮುನ್ನ ಪಾರ್ಟಿ ಇನ್ ಪರ್ಸನ್ ಆಗಿ ವಾದಿಸಿದ ಸ್ನೇಹಮಯಿ ಕೃಷ್ಣ ಅವರು ಹೆಚ್ಚುವರಿ ಆಧಾರಗಳನ್ನು ಒಳಗೊಂಡಿರುವ ಹೆಚ್ಚುವರಿ ಪ್ರತಿಭಟನಾ ಅರ್ಜಿ ಮತ್ತು ದಾಖಲೆಗಳು ಮತ್ತು ಮೆಮೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಕರಣದಲ್ಲಿ ಯಾವೆಲ್ಲಾ ಸಾಕ್ಷಿಗಳನ್ನು ಆಲಿಸಬೇಕು ಎಂಬುದರ ಪಟ್ಟಿಯನ್ನೂ ನ್ಯಾಯಾಲಯಕ್ಕೆ ಕೃಷ್ಣ ಸಲ್ಲಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು. ಈಚೆಗೆ ವಿಶೇಷ ನ್ಯಾಯಾಲಯಕ್ಕೆ ಅಂತಿಮ ಬಿ ವರದಿ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿರುದ್ಧ ಮುಂದುವರಿಯಲು ಯಾವುದೇ ದಾಖಲೆಗಳು ಇಲ್ಲ ಎಂದಿತ್ತು.