ಸಾಮಾಜಿಕ ಜಾಲತಾಣದ ಖಾತೆ ಎಂದ ಮಾತ್ರಕ್ಕೆ ಏನು ಬೇಕಾದರೂ ಪೋಸ್ಟ್‌ ಮಾಡಲು ಪರವಾನಗಿ ಸಿಕ್ಕಂತಲ್ಲ: ಹೈಕೋರ್ಟ್

“ಪೋಸ್ಟ್‌ ಮಾಡಲಾಗುವ ಸಂದೇಶಗಳು ಸಂವಿಧಾನದ 19(1)(ಎ) ವಿಧಿಯಡಿ ಖಾತರಿಪಡಿಸಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಹಾಗೂ ಮಿತಿಗಳೊಳಗೆ ಇರಬೇಕು” ಎಂದು ನ್ಯಾಯಾಲಯ ಹೇಳಿದೆ.
social media trolls/trolling
social media trolls/trolling
Published on: 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಸಂದೇಶಗಳು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಚಲಾವಣೆ ಹಾಗೂ ಅದರ ಮಿತಿಯ ಒಳಗೇ ಇರಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಪುನರುಚ್ಚರಿಸಿದೆ.

ವ್ಯಕ್ತಿಯೊಬ್ಬರ ಮೈಮೇಲೆ ಆಟೊ ರಿಕ್ಷಾ ಹತ್ತಿಸಿ ಹತ್ಯೆಗೆ ಯತ್ನಿಸಿದ ಮತ್ತು ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ ಪ್ರಕಟಿಸಿದ ಆರೋಪ ಎದುರಿಸುತ್ತಿರುವ ಉಜಿರೆಯ ಶುಭಾ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಈ ಕುರಿತಂತೆ ಆದೇಶಿಸಿದೆ.

Justice Suraj Govindraj
Justice Suraj Govindraj

“ತಮಗೆ ಬೇಕಾದಂತೆ ಯಾವುದೇ ಸಂದೇಶವನ್ನು ಪ್ರಕಟಿಸುವುದಕ್ಕೆ ನಮಗೆ ಮುಕ್ತ ಪರವಾನಗಿ ಇದೆ ಎಂದು ಯಾರು ಭಾವಿಸಬಾರದು. ಸಾಮಾಜಿಕ ಜಾಲತಾಣದ ಖಾತೆ ಇದೆ ಎಂದ ಮಾತ್ರಕ್ಕೆ ಅದು ಯಾರೊಬ್ಬರ ಮುಕ್ತ ಪರವಾನಗಿ ಅಲ್ಲ. ಈ ಪ್ರಕರಣದಲ್ಲಿ ದೂರುದಾರರ ಆರೋಪಗಳು ಸುಳ್ಳು ಎಂದು ತಳ್ಳಿಹಾಕುವಂತಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಉಜಿರೆಯ ತನುಷ್‌ ಎಂ.ಶೆಟ್ಟಿ, ‘ಶುಭಾ ಅವರು 2024ರ ಏಪ್ರಿಲ್‌ 16ರಂದು ಸಂಜೆ 6 ಗಂಟೆಗೆ ನನ್ನ ಮೈಮೇಲೆ ಆಟೊ ರಿಕ್ಷಾ ಹರಿಸಿ ನನ್ನ ಪ್ರಾಣ ತೆಗೆಯಲು ಪ್ರಯತ್ನಿಸಿದ್ದರು. ನನ್ನ ಮಾನಹಾನಿಯಾಗುವಂತಹ ವಿವಿಧ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ’ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಶುಭಾ ವಿರುದ್ಧ 2025ರ ಏಪ್ರಿಲ್‌ 24ರಂದು ದೂರು ನೀಡಿದ್ದರು. ಇದರ ಆಧಾರದಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್ 353(2) ಮತ್ತು 62ರ ಅಡಿ ಎಫ್‌ಐಆರ್‌ ದಾಖಲಿಸಿದ್ದರು.