ದುರ್ಬಳಕೆಯಾಗದ ಸಾಮಾಜಿಕ ಮಾಧ್ಯಮ ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭ: ಬಾಂಬೆ ಹೈಕೋರ್ಟ್

ಶಾಸಕರೊಬ್ಬರ ಫೇಸ್‌ಬುಕ್‌ ಖಾತೆ ಹ್ಯಾಕ್ ಮಾಡಿ ರಾಜಕೀಯ ವಿರೋಧಿಗಳನ್ನು ನಿಂದಿಸಿದ ವ್ಯಕ್ತಿಯ ವಿರುದ್ಧದ ಎಫ್ಐಆರ್ ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Social Media
Social Media
Published on

ಮಹಾರಾಷ್ಟ್ರದ ಶಾಸಕ ರವಿ ರಾಣಾ ಅವರ ಫೇಸ್‌ಬುಕ್ ಪುಟ ಹ್ಯಾಕ್ ಮಾಡಿ ಅವರ ರಾಜಕೀಯ ವಿರೋಧಿಗಳ ವಿರುದ್ಧ ನಿಂದನೀಯ ಭಾಷೆ ಬಳಸಿದ ವ್ಯಕ್ತಿ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ಅನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಸೋಮವಾರ ರದ್ದುಗೊಳಿಸಿದೆ [ಸೂರಜ್ ಅರವಿಂದ್ ಠಾಕರೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ನ್ಯಾಯಯುತ ಟೀಕೆ, ಭಿನ್ನಾಭಿಪ್ರಾಯ ಮತ್ತು ವಿಡಂಬನಾತ್ಮಕ ಹೇಳಿಕೆಗಳಿಗೆ ತೋರಿರುವ ಸಹಿಷ್ಣುತೆಯಿಂದಾಗಿ ಭಾರತೀಯ ಪ್ರಜಾಪ್ರಭುತ್ವ ಪ್ರಗತಿ ಸಾಧಿಸಿದೆ ಎಂದು ನ್ಯಾಯಮೂರ್ತಿಗಳಾದ ಸುನೀಲ್ ಶುಕ್ರೆ ಮತ್ತು ಎಂಡಬ್ಲ್ಯೂ ಚಾಂದವಾನಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ವಾಟ್ಸಾಪ್, ಟೆಲಿಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳು ಇಂದು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಪ್ರತಿಯಾಗಿ ಅಭಿಪ್ರಾಯಗಳನ್ನು ತಿಳಿಸುವ, ವಿಮರ್ಶಾತ್ಮಕ ಅಥವಾ ವಿಡಂಬನಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡುವ ಪ್ರಬಲ ಮಾಧ್ಯಮವಾಗಿ ಮಾರ್ಪಟ್ಟಿದ್ದು ಇದರಿಂದಾಗಿ ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ" ಎಂದು ನ್ಯಾಯಾಲಯ ವಿವರಿಸಿದೆ.

Also Read
ಸಾಮಾಜಿಕ ಮಾಧ್ಯಮ ಖಾತೆಗಳ ಶಾಶ್ವತ ಅಮಾನತು ಮಾರ್ಗಸೂಚಿ ಬರಲಿದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

ಆದರೆ, ಸಂವಿಧಾನದ 19(2)ನೇ ವಿಧಿಯಡಿಯಲ್ಲಿ ವಾಕ್‌ಸ್ವಾತಂತ್ರ್ಯ ಕುರಿತ ಸೂಕ್ತ ನಿರ್ಬಂಧಗಳಿಗೆ ಒಳಪಡದ ಅಥವಾ ಅಪರಾಧವಾಗುವಂತಹ ಟೀಕೆಗಳನ್ನು ಪೋಸ್ಟ್ ಮಾಡುವ ಮೂಲಕ ದುರುಪಯೋಗಪಡಿಸಿಕೊಳ್ಳದೆ ಇರುವವರೆಗೆ ಮಾತ್ರ ಇದು ಸಾಧ್ಯ ಎಂದು ಪೀಠ ಎಚ್ಚರಿಸಿದೆ.

“ವ್ಯಕ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ತಾವು ಬಳಸಿದ ಪದಗಳು ಅಶ್ಲೀಲ ಇಲ್ಲವೇ ಅಪಮಾನಕರವಾಗಿರದಂತೆ, ಅಪಾರ್ಥಕ್ಕೆ ಎಡೆ ಮಾಡಿಕೊಡದಂತೆ ಎಚ್ಚರವಹಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದ ಆರೋಗ್ಯಕರ ಬಳಕೆಯ ಅಗತ್ಯ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ತಡೆಗಟ್ಟುವ ಅಗತ್ಯತೆಯ ನಡುವೆ ಸಮತೋಲನವನ್ನು ಸಾಧಿಸಬೇಕಿದೆ” ಎಂದು ಅದು ಹೇಳಿತು.

ಪ್ರಸ್ತುತ ಪ್ರಕರಣದಲ್ಲಿ ಸೆಕ್ಷನ್ 153ಎ ಅಡಿಯಲ್ಲಿ ಅಪರಾಧ ಮಾಡಿಲ್ಲವಾದರೂ, ಸಾರ್ವಜನಿಕ ಹುದ್ದೆಯಲ್ಲಿರುವವರನ್ನು ನಿಂದಿಸಲು ಆರೋಪಿಗೆ ಪರವಾನಗಿ ನೀಡುವುದಿಲ್ಲ ಎಂದ ಪೀಠ, ಕಕ್ಷಿದಾರರು ಭವಿಷ್ಯದಲ್ಲಿ ಸಂಯಮದಿಂದ ವರ್ತಿಸುತ್ತಾರೆ ಎಂಬ ಭರವಸೆಯೊಂದಿಗೆ ಎಫ್‌ಐಆರ್ ರದ್ದುಗೊಳಿಸಿತು.

Kannada Bar & Bench
kannada.barandbench.com