RS Prasad speaking during the Press Conference today
RS Prasad speaking during the Press Conference todayYouTube

ಸಾಮಾಜಿಕ ಮಾಧ್ಯಮ, ಸುದ್ದಿತಾಣ, ಒಟಿಟಿ ವೇದಿಕೆಗಳಿಗೆ ಕಡಿವಾಣ ಹಾಕಲು ಮುಂದಾದ 2021ರ ಮಾಹಿತಿ ತಂತ್ರಜ್ಞಾನ ನಿಯಮಾವಳಿ

ಗುರುವಾರ ಪತ್ರಿಕಾಗೋಷ್ಟಿಯಲ್ಲಿ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್, "ಸಾಮಾಜಿಕ ಮಾಧ್ಯಮಗಳು ದ್ವಿಮುಖ ನೀತಿ ಅಳವಡಿಸಿಕೊಳ್ಳಬಾರದು" ಎಂದರು.

ಆನ್‌ಲೈನ್ ಮಾಧ್ಯಮ ಪೋರ್ಟಲ್‌ಗಳು ಮತ್ತು ಪ್ರಕಾಶಕರು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ಕಾರ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳನ್ನು ಜಾರಿಗೆ ತಂದಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 79 (2) (ಸಿ) ಮತ್ತು ಸೆಕ್ಷನ್ 69 ಎ (2) ಅಡಿ ನೀಡಲಾದ ಅಧಿಕಾರಗಳಿಗೆ ಅನುಸಾರವಾಗಿ ರೂಪಿಸಲಾದ ನಿಯಮಗಳಿಂದಾಗಿ ಚಲನಚಿತ್ರಗಳು ಮತ್ತುವೆಬ್‌ ಸರಣಿಯನ್ನೂ ಒಳಗೊಂಡಂತೆ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ವರ್ಗೀಕರಿಸಲು ಅವಕಾಶ ಮಾಡಿದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ಡಿಜಿಟಲ್‌ ಸುದ್ದಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಮಗಳ ವ್ಯಾಪ್ತಿಗೆ ತರಲಾಗಿದ್ದು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳನ್ನು ನಿಯಂತ್ರಿಸುವ ಯತ್ನ ಇದಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ “ಭಾರತದಲ್ಲಿ ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳು ಸ್ವಾಗತಾರ್ಹವಾದರೂ, ಅವು ಭಾರತೀಯ ಕಾನೂನುಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ದ್ವಿಮುಖ ನೀತಿ‌ ಅಳವಡಿಸಿಕೊಳ್ಳುವುದನ್ನು ತಪ್ಪಿಸಬೇಕು" ಎಂದರು.

ಸರ್ಕಾರ ಟೀಕೆ ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ಸ್ವಾಗತಿಸುತ್ತದೆ ಎಂದ ಅವರು “ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿ ನಡೆದರೆ ಸಾಮಾಜಿಕ ಮಾಧ್ಯಮ ಪೊಲೀಸ್‌ ಕ್ರಮವನ್ನು ಬೆಂಬಲಿಸುತ್ತದೆ. ಭಾರತದ ವಿಮೋಚನೆಯ ಸಂಕೇತವಾದ, ನಮ್ಮ ಪ್ರಧಾನಿ ರಾಷ್ಟ್ರಧ್ವಜ ಹಾರಿಸುವ ಕೆಂಪುಕೋಟೆ ಮೇಲೆ ಆಕ್ರಮಣಕಾರಿ ದಾಳಿ ನಡೆದರೆ ದ್ವಿಮುಖ ನೀತಿ ಅನುಸರಿಸಸಲಾಗುತ್ತದೆ. ಸರಳವಾಗಿ ಇದನ್ನು ಒಪ್ಪಲಾಗದು” ಎಂದರು.

ಮಧ್ಯವರ್ತಿಗಳು ಮತ್ತು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗಾಗಿ ಮಾರ್ಗಸೂಚಿಗಳು

ಸಾಮಾಜಿಕ ಮಾಧ್ಯಮ ಮಧ್ಯವರ್ತಿ 'ತನ್ನ ಕಂಪ್ಯೂಟರ್‌ನಲ್ಲಿನ ಮಾಹಿತಿಯ ಮೊದಲ ಮೂಲವನ್ನು ಗುರುತಿಸಲು ಶಕ್ತಗೊಳಿಸಬೇಕು.

ಸಾಮಾಜಿಕ ಮಾಧ್ಯಮ ಮಧ್ಯವರ್ತಿಯ ಭಾರತದ ಭೌತಿಕ ವಿಳಾಸವನ್ನು ಜಾಲತಾಣದಲ್ಲಿ ಇಲ್ಲವೇ ಮೊಬೈಲ್‌ ಆಧಾರಿತ ಅಪ್ಲಿಕೇಷನ್‌ಗಳಲ್ಲಿ ಅಥವಾ ಎರಡರಲ್ಲೂ ಉಲ್ಲೇಖಿಸಿರಬೇಕು.

ಅಶ್ಲೀಲ, ಪೊರ್ನೋಗ್ರಫಿಕ್‌, ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ, ಭಾರತದ ಐಕ್ಯತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ, ವಿದೇಶಿ ರಾಜ್ಯಗಳೊಂದಿಗಿನ ಸ್ನೇಹ ಸಂಬಂಧಗಳು, ಇಲ್ಲವೇ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಅಥವಾ ಅಪರಾಧಗಳನ್ನು ಪ್ರಚೋದಿಸುವ ಇಲ್ಲವೆ ಅಪರಾಧ ತನಿಖೆಗೆ ತಡೆಯೊಡ್ಡುವ ಅಥವಾ ಇತರೆ ದೇಶಗಳನ್ನು ಅವಮಾನಿಸುವ ಸಂಗತಿಗಳನ್ನು ಬಳಸುವಂತಿಲ್ಲ ಎಂದು ಬಳಕೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು.

ವ್ಯಕ್ತಿಯನ್ನು ದಾರಿತಪ್ಪಿಸುವ ಅಥವಾ ಕಿರುಕುಳ ನೀಡುವ ಉದ್ದೇಶದಿಂದ ಅಥವಾ ಯಾವುದೇ ವ್ಯಕ್ತಿಗೆ ನೋವುಂಟು ಮಾಡುವ ಉದ್ದೇಶದ ಸುಳ್ಳು ಅಥವಾ ಅಸತ್ಯದ ವಿಚಾರಗಳನ್ನು ಯಾವುದೇ ವಿಧಾನದಲ್ಲಿ ಪ್ರಕಟಿಸಬಾರದು ಅಥವಾ ಬರೆಯಬಾರದು.

ಡಿಜಿಟಲ್ / ಆನ್‌ಲೈನ್ ಮಾಧ್ಯಮಕ್ಕಾಗಿ ನೀತಿ ಸಂಹಿತೆ

ಡಿಜಿಟಲ್‌ ಮತ್ತು ಆನ್‌ಲೈನ್‌ ಮಾಧ್ಯಮವನ್ನು ನಿಯಮಾವಳಿಗಳ ಭಾಗ III ನೀತಿ ಸಂಹಿತೆಯ ಮೂಲಕ ನಿಯಂತ್ರಿಸಲಾಗಿದ್ದು 1995 ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಂತ್ರಣ ಕಾಯಿದೆ ಸೆಕ್ಷನ್ 5 ರ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆ ರೂಪಿಸಲಾಗಿದೆ. 1978ರ ಪತ್ರಿಕಾ ಮಂಡಳಿ ಕಾಯಿದೆಯ ಮಾನದಂಡಗಳನ್ನು ಅನ್ವಯಿಸಲಾಗಿದೆ.

ಆನ್‌ಲೈನ್‌ ಕಂಟೆಂಟ್‌ಗಳಿಗೆ ಕೂಡ ʼಯುʼ ʼಯುಎʼ ಹಾಗೂ ʼಎʼ ಎಂಬ ವರ್ಗೀಕರಣ ಇರಲಿದೆ.

ಭಾರತದ ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಂದರ್ಭವನ್ನು ಕೂಡ ಗಣನೆಗೆ ತೆಗೆದುಕೊಳ್ಳತಕ್ಕದ್ದು.

ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ಗುಂಪಿನ ಚಟುವಟಿಕೆಗಳು, ನಂಬಿಕೆ, ಆಚರಣೆ ಅಥವಾ ದೃಷ್ಟಿಕೋನಗಳನ್ನು ಒಳಗೊಂಡಿದ್ದರೆ ಆಗ ಸೂಕ್ತ ಎಚ್ಚರಿಕೆ ಮತ್ತು ವಿವೇಚನೆ ಬಳಸಬೇಕು.

ಬಳಕೆದಾರರ ಕುಂದುಕೊರತೆಗಳನ್ನು ಪರಿಹರಿಸಲು ಸ್ವನಿಯಂತ್ರಣ, ಸಂಸ್ಥೆಗಳ ಮೂಲಕ ನಿಯಂತ್ರಣ, ಕೇಂದ್ರ ಸರ್ಕಾರದ ನಿಗಾ ಎಂಬ ಮೂರು ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಕುಂದುಕೊರತೆ ಪೋರ್ಟಲ್‌ ಸ್ಥಾಪಿಸಲಾಗಿದ್ದು ಅಲ್ಲಿ ಕಂಟೆಂಟ್‌ ವಿಚಾರವಾಗಿ ಸಮಸ್ಯೆಗಳಿದ್ದವರು ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ಪ್ರಕಾಶಕರು ಮತ್ತು ಕಂಟೆಂಟ್‌ ಜನಕರು ಭಾರತದ ವ್ಯಾಪ್ತಿಯೊಳಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ ʼಬ್ರಾಡ್‌ಕಾಸ್ಟ್‌ ಸೇವಾʼದ ಗಮನಕ್ಕೆ ತರುವುದು ಕಡ್ಡಾಯ.

Kannada Bar & Bench
kannada.barandbench.com