ಮಕ್ಕಳ ಅಶ್ಲೀಲ ಚಿತ್ರ ತಡೆಗೆ ಸಾಮಾಜಿಕ ಮಾಧ್ಯಮಗಳು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು: ದೆಹಲಿ ಹೈಕೋರ್ಟ್‌

ಸಾಮಾಜಿಕ ಮಾಧ್ಯಮಗಳಲ್ಲಿರುವ ಮಕ್ಕಳ ಅಶ್ಲೀಲ ದೃಶ್ಯಾವಳಿಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯ ಆದೇಶ ನೀಡಿದೆ.
Stop Child Pornography
Stop Child Pornography
Published on

ಶಾಸನಬದ್ಧ ಚೌಕಟ್ಟನ್ನು ಗಮನದಲ್ಲಿರಿಸಿಕೊಂಡು ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳ ಅಶ್ಲೀಲ ಚಿತ್ರಗಳಿಗೆ ಅವಕಾಶ ನೀಡದಂತೆ ಎಲ್ಲಾ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಅರ್ಜಿದಾರರರಾಗಿರುವ ಯುವತಿಗೆ ಶಾಲೆಯಲ್ಲಿದ್ದಾಗ ಒಬ್ಬ ಹುಡುಗನೊಂದಿಗೆ (ಆರೋಪಿ) ಪರಿಚಯವಾಗಿತ್ತು. ಆತನಿಂದ ಆಕೆ ದೂರವಾಗಿದ್ದರೂ ಆಕೆಯ ಖಾಸಗಿ ಚಿತ್ರಗಳನ್ನು ಟ್ವಿಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಆತ ಹಂಚಿಕೊಂಡಿದ್ದ. ಇದು ಯುವತಿ ಆಸ್ಟ್ರೇಲಿಯಾದಲ್ಲಿದ್ದಾಗ ಆಕೆಯ ಗಮನಕ್ಕೆ ಬಂದಿತ್ತು. ಆಕೆ ಈ ಸಂಬಂಧ ದೆಹಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಫೇಸ್‌ಬುಕ್‌, ಗೂಗಲ್‌, ಯೂಟ್ಯೂಬ್‌ನಿಂದ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಬೇಕೆಂದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಆರೋಪಿ ಮಾತ್ರವಲ್ಲದೆ ಅನೇಕ ವ್ಯಕ್ತಿಗಳು ಆಕೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದನ್ನು ಗಮನಿಸಿದ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ಏಕಸದಸ್ಯ ಪೀಠ ಹೀಗೆ ಅಭಿಪ್ರಾಯಪಟ್ಟಿದೆ:

Also Read
ಮಕ್ಕಳು ದೇಶದ ಸಂಪತ್ತು:ಮಧ್ಯಾಹ್ನದ ಬಿಸಿಯೂಟ, ಡಿಜಿಟಲ್ ಉಪನ್ಯಾಸ ನೀಡುವಂತೆ ಬಿಹಾರ ಸರ್ಕಾರಕ್ಕೆ ಪಟ್ನಾ ಹೈಕೋರ್ಟ್ ಆದೇಶ
ʼಜಾಲತಾಣಗಳ ಮೂಲಕ ಕಾರ್ಯನಿರ್ವಹಿಸುವ ವೇದಿಕೆಗಳಲ್ಲಿ ಇದಾಗಲೇ ಗುರುತಿಸಲಾದ ಆಕ್ಷೇಪಾರ್ಹ ವಿಷಯಗಳ ಪ್ರಸಾರ ತಡೆಗಟ್ಟುವಲ್ಲಿ ಇರುವ ಸಮಸ್ಯೆಯನ್ನು ಇದು ಪ್ರಧಾನವಾಗಿ ಕೇಂದ್ರೀಕರಿಸುತ್ತದೆʼ.

ಇದಕ್ಕೆ ಪ್ರತಿಕ್ರಿಯೆಯಾಗಿ ಫೇಸ್‌ಬುಕ್‌ ತನ್ನ ವೇದಿಕೆಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರವನ್ನು ನಿಷೇಧಿಸಿರುವುದಾಗಿ ಮತ್ತು ಇಂತಹ ವಿಷಯ ಹರಡದಂತೆ ತಡೆಯಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿತು. ಗೂಗಲ್‌ ತನ್ನ ಯೂಟ್ಯೂಬ್‌ ವೇದಿಕೆಯಲ್ಲಿ ಕೂಡ ಇಂತಹುದೇ ಕ್ರಮ ಕೈಗೊಂಡಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿತು.

ಇದನ್ನು ಗಮನಿಸಿದ ನ್ಯಾಯಾಲಯ ʼಸಾಮಾಜಿಕ ಮಾಧ್ಯಮಗಳು ಆಕ್ಷೇಪಾರ್ಹ ವಿಷಯಗಳನ್ನು ನಿಷೇಧಿಸಲು ಅಥವಾ ತೆಗೆದುಹಾಕುವ ಸಂಬಂಧ ಯಾವುದೇ ವಿವಾದಗಳಿಲ್ಲʼ ಎಂದು ಹೇಳಿತು. ಮಾಹಿತಿ ತಂತ್ರಜ್ಞಾನ ಕಾಯ್ದೆ, ಶ್ರೇಯಾ ಸಿಂಘಲ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ ಈಗಿರುವ ಪ್ರಶ್ನೆ ಎಂದರೆ ಆಕ್ಷೇಪಾರ್ಹ ವಿಷಯಗಳನ್ನು ತೆಗೆದು ಹಾಕಲು ನ್ಯಾಯಾಲಯ ಅಥವಾ ಸರ್ಕಾರಿ ಸಂಸ್ಥೆಯ ಆದೇಶವೇನಾದರೂ ಅಗತ್ಯವಿದೆಯೇ ಎಂಬುದು. ಆದರೆ ಇದು ನ್ಯಾಯಾಲಯದ ಪರಿಹಾರದಿಂದ ಹೊರಗುಳಿದಿರುವ ವಿಷಯವೇನೂ ಅಲ್ಲ ಎಂದಿತು. ಸಾಮಾಜಿಕ ಮಾಧ್ಯಮಗಳು ನ್ಯಾಯಾಲಯದ ಆದೇಶ ಅಥವಾ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಂದ ದೊರೆತ ನೈಜ ಮಾಹಿತಿಯ ಆದೇಶವನ್ನು ಅಧರಿಸಿ ಕ್ರಮ ಕೈಗೊಳ್ಳಬೇಕು ಎನ್ನುವ ಶ್ರೇಯಾ ಸಿಂಘಲ್‌ ಪ್ರಕರಣದಲ್ಲಿನ ವಿವರಣೆಯನ್ನು ನೆನಪಿಸಿತು.

ಜೊತೆಗೆ ಅರ್ಜಿದಾರರಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಚಾರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ನಿರ್ದೇಶನ ನೀಡಿದ ಪೀಠ ಅರ್ಜಿದಾರರ ವಿರುದ್ಧದ ಅಪರಾಧದ ವಿವರವನ್ನು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಗೆ (ಎನ್‌ಸಿಆರ್‌ಬಿ) ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತು.

Kannada Bar & Bench
kannada.barandbench.com