ಹೋರಾಟಗಳಿಂದ ರೂಪುಗೊಂಡ ಕಾನೂನಿನ ಸಮರ್ಪಕ ಅನುಷ್ಠಾನದಿಂದ ಸಾಮಾಜಿಕ ಸುಧಾರಣೆ ಸಾಧ್ಯ: ನ್ಯಾ. ಮುರಳೀಧರ್‌

ಸಂವಿಧಾನದ ಅದರ್ಶಗಳನ್ನು ಅನುಷ್ಠಾನಗೊಳಿಸಲು ಜನರು ನಿರಂತರವಾಗಿ ಶ್ರಮಿಸಬೇಕು. ಸಂವಿಧಾನವು ಸಾಮಾಜಿಕ ಕ್ರಾಂತಿಯ ದಾಖಲೆಯಾಗಿದೆ ಎಂದ ನ್ಯಾ. ಮುರಳೀಧರ್.‌
S Muralidhar, Chief Justice of Orissa High Court
S Muralidhar, Chief Justice of Orissa High Court

“ಹೋರಾಟಗಳಿಂದ ರೂಪುಗೊಂಡ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದಾಗ ಸಾಮಾಜಿಕ ಸುಧಾರಣೆ ಕಾಣಲು ಸಾಧ್ಯ” ಎಂದು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಹೇಳಿದರು.

ಪರ್ಯಾಯ ಕಾನೂನು ವೇದಿಕೆ ಸಂಘಟನೆ ಶನಿವಾರ ನಗರದ ಸೇಂಟ್ ಜೋಸೆಫ್ಸ್ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ “ಸಾಮಾಜಿಕ ಸುಧಾರಣೆಯ ಕೈಪಿಡಿ ಸಂವಿಧಾನ: ಮುಂದಿನ ಸವಾಲುಗಳು” ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

“ಕಾನೂನುಗಳು ಸಾಮಾಜಿಕ ಸುಧಾರಣೆಯ ಸಾಧನಗಳಾಗಿವೆ. ಸಾಮಾಜಿಕ ಚಳುವಳಿಗಳು ಕಾನೂನಿನ ಬದಲಾವಣೆಗೆ ನಾಂದಿಯಾಗಲಿವೆ. ಹೋರಾಟಗಳಿಂದ ರೂಪುಗೊಂಡ ಕಾನೂನುಗಳ ಅನುಷ್ಠಾನದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಸಾಮಾಜಿಕ ಚಳವಳಿಯಿಂದಲೇ ಮಾಹಿತಿ ಹಕ್ಕು ಕಾಯಿದೆ, ಅರಣ್ಯ ಹಕ್ಕು ಕಾಯಿದೆ, ಭೂ ಸುಧಾರಣೆ ಕಾಯಿದೆಯಂಥ ಮಹತ್ವದ ಕಾಯಿದೆಗಳು ರೂಪುಗೊಂಡಿವೆ. ಅವುಗಳ ಅನುಷ್ಠಾನ ಸಹ ಉತ್ತಮವಾಗಿವೆ. ಹೀಗಾಗಿ, ಸುಧಾರಣೆ ತರುವುದು ಕಷ್ಟ ಎಂದು ಹೋರಾಟ ನಿಲ್ಲಸಬಾರದು. ನಿರಂತರ ಹೋರಾಟವೇ ಮುಂದೆ ಜಯ ತಂದುಕೊಡುತ್ತದೆ” ಎಂದರು.

“ಶಾಸನಸಭೆ ಮತ್ತು ನ್ಯಾಯಾಂಗ ಮಧ್ಯಪ್ರವೇಶದ ಹೊರತಾಗಿಯೂ ಸಾಮಾಜಿಕ ಬದಲಾವಣೆ ನಿರೀಕ್ಷಿತ ಪ್ರಮಾಣದಲ್ಲಿ ಉಂಟಾಗಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡದವರ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಜೀವ ಪದ್ಧತಿ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯಿದೆ ಜಾರಿಯಾಗಿ ಹಲವು ದಶಕಗಳೇ ಕಳೆದರೂ ಈಗಲೂ ಆ ಸಮಸ್ಯೆಗಳಿವೆ. ಆದ್ದರಿಂದ ಕಾನೂನಿನ ರಚನೆಗಾಗಿ ಜನ ಎಷ್ಟು ಹೋರಾಟ ಮಾಡುತ್ತಾರೋ, ಕಾನೂನು ರೂಪಗೊಂಡ ಬಳಿಕ ಅದರ ಸಮರ್ಪಕ ಅನುಷ್ಠಾನಕ್ಕೂ ಪ್ರಬಲ ಹೋರಾಟ ಮಾಡಬೇಕಾಗುತ್ತದೆ” ಎಂದರು.

“ಸಂವಿಧಾನದ ಆದರ್ಶ ಹಾಗೂ ಮೌಲ್ಯಗಳು ಮನೆಯ ಮೌಲ್ಯಗಳಾದಾಗ ಸಂವಿಧಾನದ ಧ್ಯೇಯೋದ್ದೇಶಗಳು ಈಡೇರುತ್ತವೆ. ಇದು ಸಂತೃಪ್ತಿ ಮತ್ತು ಹತಾಶೆಯ ಸಮಯವಲ್ಲ. ಸಂವಿಧಾನದ ಅದರ್ಶಗಳನ್ನು ಅನುಷ್ಠಾನಗೊಳಿಸಲು ಜನರು ನಿರಂತರವಾಗಿ ಶ್ರಮಿಸಬೇಕು. ಸಂವಿಧಾನವು ಸಾಮಾಜಿಕ ಕ್ರಾಂತಿಯ ದಾಖಲೆಯಾಗಿದೆ. ದಲಿತರಿಗೆ ಬಹಿಷ್ಕರಿಸಿದ್ದ ಕೆರೆಯ ನೀರನ್ನು ಡಾ. ಬಿ.ಆರ್. ಅಂಬೇಡ್ಕರ್ ದಲಿತರೊಂದಿಗೆ ಕುಡಿದಿದ್ದು, ರಾಜಕೀಯ ಇತಿಹಾಸದ ಮೈಲುಗಲ್ಲಾಗಿದೆ” ಎಂದು ತಿಳಿಸಿದರು.

Related Stories

No stories found.
Kannada Bar & Bench
kannada.barandbench.com