ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯಲ್ಲ, ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ: ಸರ್ಕಾರ

“ದತ್ತಾಂಶವಿಲ್ಲದೇ ತರ್ಕಬದ್ಧ ನೀತಿ ಅಥವಾ ಸಲಹೆ ನೀಡುವುದು ಹೇಗೆ? ಅರ್ಜಿದಾರರು ಸರ್ಕಾರದ ತೀರ್ಮಾನ ಪ್ರಶ್ನಿಸಲು ಬಯಸುತ್ತಿಲ್ಲ. ಆದರೆ, ನಿರ್ಧಾರ ಕೈಗೊಳ್ಳಲು ಮುಂದಾಗಿರುವ ದತ್ತಾಂಶ ಸಂಗ್ರಹ ಪ್ರಕ್ರಿಯೆ ಪ್ರಶ್ನಿಸುತ್ತಿದ್ದಾರೆ” ಎಂದ ಸಿಂಘ್ವಿ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯಲ್ಲ, ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ: ಸರ್ಕಾರ
Published on

ರಾಜ್ಯ ಸರ್ಕಾರವು ರೂಪಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದೆ. ಜನರು ಸಮೀಕ್ಷೆಯಲ್ಲಿ ಭಾಗಿಯಾಗುವುದು ಸ್ವಯಂಪ್ರೇರಿತ ಪ್ರಕ್ರಿಯೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಸಮೀಕ್ಷೆಗಾಗಿ ಆಗಸ್ಟ್‌ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್‌ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅರ್ಜಿದಾರರು ಜಾತಿ ಸಮೀಕ್ಷೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ” ಎಂದು ಆಕ್ಷೇಪಿಸಿದರು.

ಆಗ ಪೀಠವು “ಪ್ರತಿಯೊಬ್ಬ ನಿವಾಸಿಯನ್ನು ಪತ್ತೆ ಮಾಡಿ, ಅವರ ಜಾತಿಯನ್ನು ಗುರುತಿಸಲಾಗುತ್ತಿದೆ ಎಂಬುದು ಅರ್ಜಿದಾರರ ವಾದವಾಗಿದೆ. ವ್ಯತ್ಯಾಸವೇನು” ಎಂದು ಪ್ರಶ್ನಿಸಿತು. ಅದಕ್ಕೆ ಸಿಂಘ್ವಿ ಅವರು “ದತ್ತಾಂಶವಿಲ್ಲದೇ ಕಲ್ಯಾಣ ಕ್ರಮಗಳನ್ನು ರೂಪಿಸಲಾಗದು. ಇದು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ. ವಿಶೇಷ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯ ಮಧ್ಯಂತರ ತಡೆ ನೀಡಬಹುದಾಗಿದೆ” ಎಂದರು.

“ದತ್ತಾಂಶವಿಲ್ಲದೇ ತರ್ಕಬದ್ಧ ನೀತಿ ಅಥವಾ ತರ್ಕಬದ್ಧ ಸಲಹೆ ನೀಡುವುದು ಹೇಗೆ? ಅರ್ಜಿದಾರರು ಸರ್ಕಾರದ ತೀರ್ಮಾನ ಪ್ರಶ್ನಿಸಲು ಬಯಸುತ್ತಿಲ್ಲ. ಆದರೆ, ನಿರ್ಧಾರ ಕೈಗೊಳ್ಳಲು ಸಂಗ್ರಹಕ್ಕೆ ಮುಂದಾಗಿರುವ ದತ್ತಾಂಶ ಸಂಗ್ರಹ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದಾರೆ. ಸಂಪೂರ್ಣ ವಾದ ಆಲಿಸಿ ಇಡೀ ಕಾಯಿದೆ ಅಸಾಂವಿಧಾನಿಕ ಎಂದು ನ್ಯಾಯಾಲಯ ಹೇಳಬಹುದು. ಈ ಹಂತದಲ್ಲಿ ಮಧ್ಯಂತರ ತಡೆ ಪ್ರಶ್ನೆ ಉದ್ಭವಿಸುವುದಿಲ್ಲ. ಅರ್ಜಿದಾರರ ವಾದವನ್ನು ಒಪ್ಪಿದರೆ ದತ್ತಾಂಶ ಸಮೀಕ್ಷೆಯು ಗಣತಿ ಎಂದಾಗಲಿದೆ. ಎಣಿಕೆಯ ದೃಷ್ಟಿಯಿಂದ ಸರ್ಕಾರ ದತ್ತಾಂಶ ಸಂಗ್ರಹಿಸುವಾಗ ಖಾಸಗಿತನ ಉಲ್ಲಂಘನೆಯಾಗುವುದಿಲ್ಲ” ಎಂದರು.

ಈ ಹಂತದಲ್ಲಿ ಹಿಂದುಳಿದ ವರ್ಗಗಳ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಸಮೀಕ್ಷೆಯಲ್ಲಿ ದತ್ತಾಂಶ ನೀಡುವುದು ಸ್ವಯಂಪ್ರೇರಿತ ನಿರ್ಧಾರವಾಗಿದ್ದು, ಕಡ್ಡಾಯವಾಗಿ ಮಾಹಿತಿ ನೀಡಲೇಬೇಕಾದ ಗಣತಿ ಕಾಯಿದೆಗೆ ವಿರುದ್ಧ” ಎಂದರು.

ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಸಮೀಕ್ಷೆಗಾಗಿ ಸರ್ಕಾರ ಮತ್ತು ಆಯೋಗ ನೀಡಿರುವ ಹ್ಯಾಂಡ್‌ಬುಕ್‌ನಲ್ಲಿ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಂವಿಧಾನದ 342ನೇ ವಿಧಿಯಡಿ ನಿರ್ಬಂಧ ಇರುವುದರಿಂದ ಸಮೀಕ್ಷೆ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕಾನೂನಿನ ಅಡಿ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಉದ್ದೇಶಕ್ಕಾಗಿ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆಯನ್ನು ಗುರುತಿಸಿ, ನಿರ್ವಹಿಸಬಹುದು. ಆದರೆ, ಇದು ಕೇಂದ್ರ ಸರ್ಕಾರದ ಪಟ್ಟಿಗಿಂತ ವಿಭಿನ್ನ” ಎಂದರು.

ಇನ್ನೊಬ್ಬ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು “ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ ಸೆಕ್ಷನ್‌ 9(1)(ii) ಅಡಿ ಸಮೀಕ್ಷೆ ನಡೆಸಲು ಯಾವುದೇ ವಿಧಾನವಿಲ್ಲ. ಈ ಕಾಯಿದೆ ತಿದ್ದುಪಡಿ ಮಾಡಿರುವುದು ಸಂವಿಧಾನದ 342ನೇ ವಿಧಿ ಸೂಪರ್‌ ಸೀಡ್‌ ಮಾಡಲಾಗದು. ಸಮೀಕ್ಷೆಯಲ್ಲಿ ಇಡೀ ರಾಜ್ಯದ ಜನತೆಯನ್ನು ಒಳಗೊಳ್ಳಲಾಗುತ್ತದೆ. ಇದು ಗಣತಿಯಲ್ಲದೇ ಬೇರೇನೂ ಅಲ್ಲ. ಇದು ಸಂವಿಧಾನದ 342Aನೇ ವಿಧಿಗೆ ವಿರುದ್ಧವಾಗಿದ್ದು, ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದು ಚುನಾವಣೆಗಾಗಿ ಪ್ರತಿ ಜಾತಿಯ ಸಂಖ್ಯೆಯನ್ನು ಪತ್ತೆ ಮಾಡುವ ಬಣ್ಣದ ತಂತ್ರವಾಗಿದೆ” ಎಂದರು.

ರಾಜ್ಯ ಒಕ್ಕಲಿಗರ ಸಂಘ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಜಾತಿ ಗುರುತಿಸುವಿಕೆಯನ್ನು ಸ್ವೇಚ್ಛೆಯಿಂದ ಮಾಡಲಾಗುತ್ತಿದೆ. ಜಾತಿ ಗುರುತಿಸುವುದಕ್ಕೆ ಪೂರಕವಾಗಿ ಯಾವುದೇ ಅಧ್ಯಯನವನ್ನು ಸರ್ಕಾರ ಮಾಡಿಲ್ಲ. ಇದರಿಂದ ನಕಲಿ ಸಾಧ್ಯತೆ ಹೆಚ್ಚಾಗಲಿದ್ದು, ಜನರು ತಪ್ಪು ದತ್ತಾಂಶ ನೀಡುವ ಸಾಧ್ಯತೆ ಇದೆ. ಮಾಹಿತಿಯ ಖಾಸಗಿತನದ ಪ್ರಶ್ನೆಯೂ ಇಲ್ಲಿದ್ದು, ಡಿಜಿಟಲ್‌ ರೂಪದಲ್ಲಿ ದಾಖಲಿಸಿದ ದತ್ತಾಂಶ ಸೋರಿಕೆಯಾಗುವುದನ್ನು ಅಲ್ಲಗಳೆಯಲಾಗದು. ಸಮೀಕ್ಷೆಯಲ್ಲಿ ಎತ್ತಲಾಗಿರುವ ಪ್ರಶ್ನೆಗಳನ್ನು ನೋಡಿದರೆ ಅದು ವ್ಯಕ್ತಿಯೊಬ್ಬರ ವಿವರವಲ್ಲದೇ ಬೇರೇನೂ ಅಲ್ಲ. ಇಂಥ ಸಮೀಕ್ಷೆಗೆ ಅವಕಾಶವಿಲ್ಲ” ಎಂದರು.

Also Read
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ತಡೆ ಕೋರಿರುವ ಅರ್ಜಿಗಳ ವಿಚಾರಣೆ ನಾಳೆಗೆ ಮುಂದೂಡಿಕೆ

ಮಾಜಿ ಶಾಸಕ ಕೆ ಎನ್‌ ಸುಬ್ಬಾರೆಡ್ಡಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್‌ ರೆಡ್ಡಿ ಅವರು “ಹಲವು ಜಾತಿಗಳನ್ನು ಧರ್ಮದೊಂದಿಗೆ ತಳುಕು ಹಾಕಲಾಗಿದೆ. ಹೊಸ ಪಟ್ಟಿಯಲ್ಲಿ ಅವೈಜ್ಞಾನಿಕ ಗುಂಪು ಸೃಷ್ಟಿಸಲಾಗಿದ್ದು, ಪ್ರಮುಖ ಜಾತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಆಯೋಗವು ತನ್ನ ವಿವೇಚನ ಬಳಸಿಲ್ಲ. ಕೃತಕವಾಗಿ ಜಾತಿಗಳನ್ನು ಸೃಷ್ಟಿ ಮಾಡಲಾಗಿದ್ದು, ವಿವೇಚನೆ ಬಳಕೆ ಮಾಡಲಾಗಿಲ್ಲ. ಇದು ಗೊಂದಲಕ್ಕೆ ನಾಂದಿಯಾಗಿದೆ. ಪ್ರಮುಖ ದತ್ತಾಂಶವನ್ನು ಅಸ್ತ್ರವಾಗಿಸುವ ಉದ್ದೇಶವನ್ನು ಹೊಂದಲಾಗಿದೆ. ದತ್ತಾಂಶ ಗಣಿಗಾರಿಕೆ ಮಾಡುವುದು ಸರ್ಕಾರ ಉದ್ದೇಶವಾಗಿದೆ” ಎಂದು ಆರೋಪಿಸಿದರು.

ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ರೀರಂಗ ಸುಬ್ಬಣ್ಣ ಅವರು “ಸಮೀಕ್ಷೆ ನಡೆಸಲು ಅತ್ಯಂತ ಅವಸರ ಪಡಲಾಗುತ್ತಿದ್ದು, ಕೆಲವು ವಿಚಾರಗಳು ನಿರ್ಧಾರವಾಗುವವರೆಗೆ ಸರ್ಕಾರ ಮತ್ತು ಆಯೋಗಕ್ಕೆ ಸಮೀಕ್ಷೆ ಮುಂದುವರಿಸುವಂತೆ ನಿರ್ದೇಶಿಸುವುದು ಅಗತ್ಯವಾಗಿದೆ” ಎಂದರು.

ಎಲ್ಲ ಪಕ್ಷಕಾರರ ವಾದ ಆಲಿಸಿದ ಪೀಠವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Kannada Bar & Bench
kannada.barandbench.com