ರೈತರ ಪರಿಹಾರ ಕೋರಿಕೆ ಅರ್ಜಿಗಳ ನಿರ್ವಹಣೆಗೆ ಮೂರು ತಿಂಗಳಲ್ಲಿ ತಂತ್ರಾಂಶ ಅಭಿವೃದ್ಧಿ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಇ-ಆಫೀಸ್‌ ಮತ್ತು ನ್ಯಾಯಾಲಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಸಿಎಂಎಸ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಭೂಸ್ವಾಧೀನ ಪ್ರಕರಣಗಳನ್ನೂ ತಂತ್ರಾಂಶದ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿರುವ ಇ-ಆಡಳಿತ ಕೇಂದ್ರ.
e-filing and Karnataka HC
e-filing and Karnataka HC
Published on

ರೈತರ ಭೂಮಿ ಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಭೂಸ್ವಾಧೀನದ ಎಲ್ಲಾ ಪ್ರಕ್ರಿಯೆಗಳನ್ನು ಒಂದೇ ತಂತ್ರಾಂಶದ ಅಡಿ ಆನ್‌ಲೈನ್‌ನಲ್ಲಿ ನಿರ್ವಹಿಸಲು ಮೂರು ತಿಂಗಳೊಳಗೆ ತಂತ್ರಾಂಶ (ಸಾಫ್ಟ್‌ವೇರ್‌) ಸಿದ್ಧಪಡಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಇ-ಆಡಳಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶಿಸಿದ್ದಾರೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ತಿಳಿಸಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಾಗಲಪುರ ಗ್ರಾಮದ ಮಾಧವ ಮೂರ್ತಿ ಅವರು ತಮ್ಮಿಂದ ವಶಪಡಿಸಿಕೊಳ್ಳಲಾದ ಭೂಮಿಗೆ ಹೆಚ್ಚಿನ ಪರಿಹಾರ ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂದಾಯ ಇಲಾಖೆಯ ಭೂಸ್ವಾಧೀನ ಹಾಗೂ ಪುನರ್ವಸತಿ ವಿಭಾಗದ ಉಪಕಾರ್ಯದರ್ಶಿ ಹಾಗೂ ಭೂಸ್ವಾಧೀನ-3 ವಿಭಾಗದ ಶಾಖಾಧಿಕಾರಿ ಅವರ ಜೊತೆ ಸಭೆ ನಡೆಸಿರುವ ಕುರಿತಾದ ಮೆಮೊವನ್ನು ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಭೂಸ್ವಾಧೀನ ಕಾಯಿದೆ ಸೆಕ್ಷನ್‌ 28(1) ಅಡಿ ರೈತರು ಸಲ್ಲಿಸುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸುವ ಸಂಬಂಧ ತಂತ್ರಾಂಶ ಅಭಿವೃದ್ಧಿಪಡಿಸಬಹುದಾಗಿದೆ. ಈಗಾಗಲೇ, ಇ-ಆಫೀಸ್‌ ಮತ್ತು ನ್ಯಾಯಾಲಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಸಿಎಂಎಸ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಭೂಸ್ವಾಧೀನ ಪ್ರಕರಣಗಳನ್ನೂ ತಂತ್ರಾಂಶದ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಮೆಮೊದಲ್ಲಿ ವಿವರಿಸಲಾಗಿದೆ.

ರೈತರ ಅರ್ಜಿಗಳನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದ ತಂತ್ರಾಂಶವನ್ನು ಮೂರು ತಿಂಗಳ ಒಳಗೆ ಅಭಿವೃದ್ಧಿಪಡಿಸಿ, ಭೂಸ್ವಾಧೀನಾಧಿಕಾರಿಗಳು ಬಳಸಲು ಅನುವು ಮಾಡಿಕೊಡಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಒಂದೇ ತಂತ್ರಾಂಶದ ಅಡಿ ನಿರ್ವಹಿಸುವ ಸಾಧ್ಯತೆಯ ಕುರಿತು ಪರಿಶೀಲಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಇ-ಆಡಳಿತದ ಸಿಇಒಗೆ ಸೂಚಿಸಿದ್ದಾರೆ ಎಂದು ಮೆಮೊದಲ್ಲಿ ಉಲ್ಲೇಖಿಸಲಾಗಿದೆ.

ಪರಿಹಾರ ಕೋರಿ ರೈತರು ಸಲ್ಲಿಸುವ ಅರ್ಜಿಗೆ ಸಂಬಂಧಿತ ಭೂಸ್ವಾಧೀನ ಅಧಿಕಾರಿ ಸಹಿ ಮಾಡಿ, ದಿನಾಂಕ ನಿಗದಿಪಡಿಸಿದರೂ ಆ ನಿರ್ದಿಷ್ಟ ಅರ್ಜಿಗೆ ಸಂಖ್ಯೆ ನೀಡಲಾಗಿಲ್ಲ. ಈ ಅರ್ಜಿಗೆ ಸಂಬಂಧಿಸಿದ ನಿರ್ಧಾರದ ಕುರಿತು ತಿಳಿದುಕೊಳ್ಳಲು ಯಾವುದೇ ವಿಧಾನ ಜಾರಿ ಮಾಡಲಾಗಿಲ್ಲ. ಒಂದು ಬಾರಿ ಅರ್ಜಿ ಸಲ್ಲಿಕೆಯಾದ ಮೇಲೆ ಅದಕ್ಕೆ ಒಂದು ಸಂಖ್ಯೆ ನೀಡಬೇಕು. ಅಲ್ಲದೇ, ಕಾನೂನಿನ ಅನ್ವಯ ಅದಕ್ಕೆ ತಾರ್ತಿಕ ಅಂತ್ಯ ಹಾಡಬೇಕು. ಈ ನಿಟ್ಟಿನಲ್ಲಿ, ಪರಿಹಾರ ಹೆಚ್ಚಳ ಕೋರಿ ರೈತರು ಸಲ್ಲಿಸುವ ಅರ್ಜಿಗೆ ಸಂಖ್ಯೆ ನೀಡುವುದು, ಅರ್ಜಿಯ ಸ್ಥಿತಿಗತಿ ಅರಿಯುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಜೊತೆ ಸಭೆ ನಡೆಸಿ ವಿಧಾನ ಕಂಡು ಹಿಡಿಯಬೇಕು ಎಂದು ಪೀಠವು ಜೂನ್‌ 27ರಂದು ನಿರ್ದೇಶಿಸಿತ್ತು. ಇದರ ಭಾಗವಾಗಿ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಿದೆ.

Kannada Bar & Bench
kannada.barandbench.com