
ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಿಲಿಟರಿ ಜೀವನದ ಒತ್ತಡ ಮತ್ತು ನೋವಿನ ಬಗ್ಗೆ ಬೆಳಕು ಚೆಲ್ಲಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದ ಇಬ್ಬರು ಸೈನಿಕರಿಗೆ ಅಂಗವೈಕಲ್ಯದ ಪಿಂಚಣಿಯ ಭರವಸೆಯನ್ನು ನೀಡಿದೆ [ಭಾರತ ಒಕ್ಕೂಟ ಮತ್ತು ಇತರರು Vs ಮಾಜಿ ಸಬ್ ಗವಾಸ್ ಅನಿಲ್ ಮಾಡ್ಸೊ].
ನ್ಯಾಯಮೂರ್ತಿ ಸಿ ಹರಿಶಂಕರ್ ಮತ್ತು ನ್ಯಾಯಮೂರ್ತಿ ಅಜಯ್ ದಿಗ್ಪಾಲ್ ಅವರ ಪೀಠವು, ಯಾರೇ ಆಗಲಿ ಸೈನಿಕರಾಗಿ ದೇಶಕ್ಕೆ ಸೇವೆ ಸಲ್ಲಿಸಲು ಹೋದಾಗ ರೋಗ ಮತ್ತು ಅಂಗವೈಕಲ್ಯದ ಸಾಧ್ಯತೆಯು ಪ್ಯಾಕೇಜ್ ಒಪ್ಪಂದದಂತೆ ಬರುತ್ತದೆ ಎಂದು ವಿವರಿಸಿತು.
ನ್ಯಾಯಾಲಯವು ತನ್ನ ಆದೇಶದಲ್ಲಿ “ತಾವು ಸೇವೆ ಸಲ್ಲಿಸುವ ಪರಿಸ್ಥಿತಿಗಳನ್ನು ಗಮನಿಸಿದರೆ ಅತ್ಯಂತ ಧೈರ್ಯಶಾಲಿ ಸೈನಿಕರು ಕೂಡ ದೈಹಿಕ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆಯಿದೆ. ಅದು ಕೆಲವೊಮ್ಮೆ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಕೂಡ. ಇದರಿಂದಾಗಿ ಮಿಲಿಟರಿ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಾಗದೆ ಹೋಗಬಹುದು. ಅಂತಹ ಸಂದರ್ಭಗಳಲ್ಲಿ, ಆ ಸೈನಿಕ ನೀಡಿದ ನಿಸ್ವಾರ್ಥ ಸೇವೆಗೆ ಪ್ರತಿಫಲವಾಗಿ ರಾಷ್ಟ್ರವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ, ಅತನ ಉಳಿದ ಜೀವಿತಾವಧಿಗೆ ಸಾಂತ್ವನ ಮತ್ತು ಸವಲತ್ತನ್ನು ಒದಗಿಸುವುದು,” ಎಂದಿದೆ.
ಈ ಕಾರಣಕ್ಕಾಗಿಯೇ ಮಿಲಿಟರಿ ಸೇವೆಯಿಂದಾಗಿ ರೋಗ ಅಥವಾ ಅಂಗವೈಕಲ್ಯವನ್ನು ಎದುರಿಸುವ ಸೈನಿಕರಿಗೆ ಸಹಾಯ ಮಾಡಲು ಹಣಕಾಸಿನ ಸವಲತ್ತುಗಳನ್ನು (ಅಂಗವೈಕಲ್ಯ ಪಿಂಚಣಿಯಂತಹ ಯೋಜನೆ) ನೀಡುವಂತಹ ಶ್ಲಾಘನೀಯ ನಿಬಂಧನೆಗಳನ್ನು ಸೇರಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿತು.
ವಿಚಾರಣೆಯ ವೇಳೆ ನ್ಯಾಯಾಲಯವು, "ಸೈನಿಕರು ಸಲ್ಲಿಸಿದ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ಪರಿಹಾರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿತು. ಮುಂದುವರೆದು, "(ಜಾನ್ ಎಫ್ ಕೆನಡಿ ಹೇಳಿದರು) 'ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ; ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ಕೇಳಿಕೊಳ್ಳಿ,' ಎನ್ನುವ ಮೇಲಿನ ಈ ಮಾತನ್ನು ಶ್ಲಾಘಿಸುವವರು, ಗೌರವಿಸುವವರು ನಮ್ಮಲ್ಲಿದ್ದಾರೆ, ಆದರೆ ಅದು ಅಲ್ಲಿಗೇ ನಿಂತುಬಿಡುತ್ತದೆ. ಆದರೆ, ಈ ಮಾತುಗಳನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವ ಮತ್ತು ತಮ್ಮ ದೇಶಕ್ಕಾಗಿ ತಮ್ಮ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಿರುವವರು ಇದ್ದಾರೆ - ಅಂತಹವರು ನಾವು ಅಗ್ಗಿಷ್ಟಿಕೆಯ ಮುಂದೆ ಬೆಚ್ಚಗೆ ಕೂತು ಬಿಸಿಬಿಸಿಯಾಗಿ ಕೆಪೆಚೀನೋ ಹೀರುತ್ತಿರುವಾಗ, ಗಡಿಯಲ್ಲಿ ಶೀತಗಾಳಿಯನ್ನು ಎದುರಿಸುತ್ತ, ಕ್ಷಣಮಾತ್ರದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ತಾಯ್ನಾಡಿನ ಈ ನೈಜ ಮಕ್ಕಳಿಗೆ ಒಂದು ರಾಷ್ಟ್ರವಾಗಿ, ಅದರ ನಾಗರಿಕರಾಗಿ ನಾವು ನೀಡುವ ಏನೊಂದು ಸಹ ಹೆಚ್ಚೆನಿಸಲು ಸಾಧ್ಯವೇ?" ಎಂದು ಪ್ರಶ್ನಿಸಿತು.
ಸಶಸ್ತ್ರ ಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) ಇಬ್ಬರು ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡಲು ಆದೇಶಿಸಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಎರಡು ಮೇಲ್ಮನವಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುವ ವೇಳೆ ಈ ಅವಲೋಕನಗಳನ್ನು ಮಾಡಿತು.
ಈ ಇಬ್ಬರು ಸೈನಿಕರಲ್ಲಿ ಒಬ್ಬರು ಗವಾಸ್ ಅನಿಲ್ ಮಾಡ್ಸೊ, ಅವರು 1985 ರಲ್ಲಿ ಸೈನ್ಯಕ್ಕೆ ಸೇರಿದ್ದರು. ಮುಂದೆ ಇವರು ಡಯಾಬಿಟಿಸ್ ಮೆಲ್ಲಿಟಸ್ (ಡಿಎಂ) ಟೈಪ್ II ರೋಗನಿರ್ಣಯದ ನಂತರ 2015 ರಲ್ಲಿ ಮಿಲಿಟರಿ ಸೇವೆಯಿಂದ ಬಿಡುಗಡೆಗೊಂಡರು.
ಈ ವೇಳೆ, ಬಿಡುಗಡೆ ವೈದ್ಯಕೀಯ ಮಂಡಳಿಯು (ಆರ್‌ಎಂಬಿ) ಗವಾಸ್ ಅವರು ಅವರು ಜೀವನಪರ್ಯಂತ ಶೇಕಡಾ 20 ರಷ್ಟು ಅಂಗವೈಕಲ್ಯವನ್ನು ಅನುಭವಿಸುತ್ತಾರೆ ಆದರೆ ಅಂಗವೈಕಲ್ಯ ಪಿಂಚಣಿಗೆ ಅರ್ಹರಾಗಿರುವುದಿಲ್ಲ ಎಂದು ತೀರ್ಮಾನಿಸಿತು.
ಅದರೆ, ಗವಾಸ್ ಅವರಿಗೆ ಅಂಗವೈಕಲ್ಯ ಪಿಂಚಣಿ ನೀಡದಿರುವ ನಿರ್ಧಾರವನ್ನು ನ್ಯಾಯಾಲಯವು ಒಪ್ಪಲಿಲ್ಲ. "ಸೇವೆಗೆ ಸೇರಿದ 34 ವರ್ಷಗಳ ನಂತರ ಪ್ರತಿವಾದಿಯು ಡಿಎಂನಿಂದ ಬಳಲುತ್ತಿರುವುದನ್ನು ಗಮನಿಸಿದಾಗ, ಡಿಎಂ ಬರಲು ಮಿಲಿಟರಿ ಸೇವೆ ಕಾರಣವಲ್ಲ ಎನ್ನುವ ನಿರ್ಧಾರಕ್ಕೆ ಬರಲು ಆರ್‌ಎಂಬಿ ವರದಿಯಲ್ಲಿ ಯಾವುದೇ ಕಾರಣಗಳಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮಿಲಿಟರಿ ಸೇವೆಯ ಸಮಯದಲ್ಲಿ ಉದ್ಭವಿಸುವ ಆರೋಗ್ಯ ಸ್ಥಿತಿಯನ್ನು ಅಂತಹ ಸೇನಾ ಸೇವೆಯಿಂದ ಉಂಟಾಗುತ್ತದೆ ಎಂದು ಸ್ವಯಂಚಾಲಿತವಾಗಿ ಭಾವಿಸಲಾಗುವುದಿಲ್ಲ ಎನ್ನುವ ಸೇವಾ ನಿಯಮವಿರುವುದನ್ನು ನ್ಯಾಯಾಲಯವು ಒಪ್ಪಿಕೊಂಡಿತು.
ಆದಾಗ್ಯೂ, ಸೈನಿಕನ ಆರೋಗ್ಯ ಸ್ಥಿತಿಗೆ ಮಿಲಿಟರಿ ಸೇವೆ ಕಾರಣ ಎಂದು ಸಾಬೀತುಪಡಿಸುವ ಪ್ರಾಥಮಿಕ ಹೊರೆ ಸೈನಿಕನ ಮೇಲಿದೆ ಎನ್ನುವುದನ್ನು ಒಪ್ಪಲಾಗದು ಎಂದು ಸ್ಪಷ್ಟವಾಗಿ ಹೇಳಿತು.
ಇದೇ ವೇಳೆ, ಸೈನಿಕನ ಖಾಯಿಲೆಗೆ ಸೇನಾ ಸೇವೆಯು ಕಾರಣವಲ್ಲ ಎಂದು ನಿರೂಪಿಸುವ ಹೊಣೆಗಾರಿಕೆಯು ಸೇನಾ ಅಧಿಕಾರಿಗಳ ಮೇಲಿದೆ. ಗವಾಸ್ ಅವರ ಪ್ರಕರಣದಲ್ಲಿ, ಇದನ್ನು ಮಾಡಲಾಗಿಲ್ಲ ಎಂದು ನ್ಯಾಯಾಲಯವು ವಿವರಿಸಿತು. ಅಂತಿಮವಾಗಿ ಗವಾಸ್ ಅವರಿಗೆ ಅಂಗವೈಕಲ್ಯದ ಪಿಂಚಣಿ ನೀಡಲು ಸೂಚಿಸಿದ್ದ ಎಎಫ್‌ಟಿ ನಿರ್ಧಾರವನ್ನು ಎತ್ತಿ ಹಿಡಿಯಿತು.
ಅದೇ ರೀತಿ, ಅಮೀನ್ ಚಂದ್ ಎಂಬ ಮಾಜಿ ಸೈನಿಕರ ವಿಚಾರದಲ್ಲಿಯೂ ನ್ಯಾಯಾಲಯವು ಎಎಫ್‌ಟಿ ನಿರ್ಧಾರವನ್ನು ಎತ್ತಿ ಹಿಡಿದು ಅವರಿಗೂ ಅಂಗವೈಕಲ್ಯ ಪಿಂಚಣಿ ನೀಡುವಂತೆ ಸೂಚಿಸಿದ್ದ ಆದೇಶವನ್ನು ಎತ್ತಿ ಹಿಡಿಯಿತು.