[ಸುವೇಂದು ಅಧಿಕಾರಿ- ಮೆಹ್ತಾ ಭೇಟಿ] ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳುವುದೇನು?

ಬಿಜೆಪಿ ಮುಖಂಡ, ನಾರದ ಹಗರಣದ ಪ್ರಕರಣದ ಆರೋಪಿ ಸುವೇಂದು ಅಧಿಕಾರಿಯೊಂದಿಗೆ ಎಸ್‌ಜಿ ಮೆಹ್ತಾ ಭೇಟಿಯಾಗಿದ್ದ ಸುದ್ದಿಯ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ತೆಗೆದು ಹಾಕಲು ಒತ್ತಾಯಿಸಿ ತೃಣಮೂಲದ ಸಂಸದರು ಪ್ರಧಾನಿಗೆ ಪತ್ರ ಬರೆದಿದ್ದರು.
Tushar Mehta
Tushar Mehta

ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಹಾಗೂ ನಾರದ ಹಗರಣದ ಆರೋಪಿಯಾಗಿರುವ ಸುವೇಂದು ಅಧಿಕಾರಿಯವರೊಂದಿಗಿನ ಭೇಟಿಯನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅಲ್ಲಗಳೆದಿದ್ದಾರೆ.

ಈ ಬಗ್ಗೆ ಬಾರ್‌ ಅಂಡ್‌ ಬೆಂಚ್‌ಗೆ ಪ್ರತಿಕ್ರಿಯಿಸಿರುವ ಮೆಹ್ತಾ ಅಧಿಕಾರಿ ತಮ್ಮನ್ನು ಭೇಟಿಯಾಗಲು ತಮ್ಮ ನಿವಾಸಕ್ಕೆ ಬಂದದ್ದು ನಿಜ ಎಂದಿದ್ದಾರೆ. ಆ ವೇಳೆ ತಾವು ತಮ್ಮ ಚೇಂಬರ್‌ನಲ್ಲಿ ಮತ್ತೊಂದು ಸಭೆಯಲ್ಲಿದ್ದು ತಮ್ಮ ಕಚೇರಿಯ ಸಿಬ್ಬಂದಿ ಅಧಿಕಾರಿಯವರಿಗೆ ಕಾಯುವಂತೆ ತಿಳಿಸಿ ಕುಡಿಯಲು ಚಹಾ ನೀಡಿದ್ದರು. ಆದರೆ, ಸಭೆಯ ನಂತರ ತನ್ನ ಖಾಸಗಿ ಆಪ್ತ ಕಾರ್ಯದರ್ಶಿಯವರ ಮೂಲಕ ಅಧಿಕಾರಿ ಅವರಿಗೆ ತಾನು ಅವರನ್ನು ಭೇಟಿಯಾಗಲು ಸಾಧ್ಯವಿಲ್ಲವೆನ್ನುವುದನ್ನು ತಿಳಿಸಿದೆ. ಇದಕ್ಕೆ ಸಮ್ಮತಿಸಿ ಅಧಿಕಾರಿ ಹೊರಟು ಹೋದರು ಎಂದು ಮೆಹ್ತಾ ಹೇಳಿದ್ದಾರೆ.

ಮೆಹ್ತಾ ಅವರ ಹೇಳಿಕೆ ಹೀಗಿದೆ:

"ಶ್ರೀ ಸುವೇಂದು ಅಧಿಕಾರಿಯವರು ನಿನ್ನೆ ನನ್ನ ನಿವಾಸದಲ್ಲಿನ ಕಚೇರಿಗೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆಗಮಿಸಿದ್ದರು. ಅದಾಗಲೆ ನಾನು ನನ್ನ ಚೇಂಬರಿನಲ್ಲಿ ಪೂರ್ವ ನಿರ್ಧರಿತ ಸಭೆಯಲ್ಲಿದ್ದುದರಿಂದ, ನನ್ನ ಸಿಬ್ಬಂದಿ ವರ್ಗದವರು ಅವರನ್ನು ಕಚೇರಿಯ ಕಟ್ಟಡದ ನಿರೀಕ್ಷಣಾ ಕೊಠಡಿಯಲ್ಲಿ ಕಾಯಲು ತಿಳಿಸಿ ಚಹಾ ನೀಡಿ ಉಪಚರಿಸಿದ್ದರು. ಸಭೆಯ ನಂತರ ನನ್ನ ಪಿಪಿಎಸ್‌ ಅವರು ಅಧಿಕಾರಿ ಅವರು ಆಗಮಿಸಿರುವ ಬಗ್ಗೆ ತಿಳಿಸಿದರು. ಅಗ ನಾನು ಅಧಿಕಾರಿಯವರನ್ನು ಭೇಟಿಯಾಗಲು ಸಾಧ್ಯವಾಗದಿರುವ ನನ್ನ ಅಸಹಾಯಕತೆಯನ್ನು ಅವರಿಗೆ ತಿಳಿಸುವಂತೆ ನನ್ನ ಪಿಪಿಎಸ್‌ ಅವರಿಗೆ ತಿಳಿಸಿ, ಅವರನ್ನು ಕಾಯಿಸಿದ್ದಕ್ಕಾಗಿ ಕ್ಷಮೆ ಕೋರಲು ತಿಳಿಸಿದೆ. ಅಧಿಕಾರಿಯವರು ನನ್ನ ಪಿಪಿಎಸ್‌ಗೆ ಧನ್ಯವಾದಗಳನ್ನು ಅರ್ಪಿಸಿ ನನ್ನನ್ನು ಭೇಟಿಯಾಗಲು ಒತ್ತಾಯಿಸದೆ ಅಲ್ಲಿಂದ ನಿರ್ಗಮಿಸಿದರು. ಹಾಗಾಗಿ, ನಾನು ಅಧಿಕಾರಿಯವರನ್ನು ಭೇಟಿಯಾಗಿದ್ದೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.”

ತೃಣಮೂಲ ಕಾಂಗ್ರೆಸ್‌ನ ಮೂವರು ಸಂಸದರು ಸುವೇಂದು ಅಧಿಕಾರಿಯವರನ್ನು ಮೆಹ್ತಾ ಭೇಟಿಯಾಗಿರುವ ಬಗ್ಗೆ ಪ್ರಸ್ತಾಪಿಸಿ ಈ ಹಿನ್ನೆಲೆಯಲ್ಲಿ ಮೆಹ್ತಾ ಅವರನ್ನು ಸಾಲಿಸಿಟರ್ ಜನರಲ್‌ ಹುದ್ದೆಯಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮೆಹ್ತಾ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಮೆಹ್ತಾ ಅವರು ಸಾಲಿಸಿಟರ್‌ ಜನರಲ್‌ ಆಗಿದ್ದು ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿದ್ದಾರೆ. ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳಿಗೆ ಸಿಬಿಐ ವಿಚಾರಣೆ ನಡೆಸುತ್ತಿರುವ ನಾರದ ಪ್ರಕರಣವೂ ಸೇರಿದಂತೆ ಪ್ರಮುಖ ಕಾನೂನು ವಿಷಯಗಳಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಸುವೇಂದು ಅಧಿಕಾರಿಯವರ ವಿರುದ್ಧ ಭ್ರಷ್ಟಾಚಾರವೂ ಸೇರಿದಂತೆ ಹಲವು ಕ್ರಿಮಿನಲ್‌ ಆರೋಪಗಳಿವೆ. ನಾರದ ಕುಟುಕು ಕಾರ್ಯಾಚರಣೆಯ ವೇಳೆ ಅಧಿಕಾರಿ ಲಂಚ ಪಡೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂತಹ ಪ್ರಕರಣದ ಆರೋಪಿಯನ್ನು ಭೇಟಿಯಾಗುವುದು ಶಾಸನಾತ್ಮಕ ಕರ್ತವ್ಯಗಳೊಂದಿಗೆ ಹಿತಾಸಕ್ತಿಯ ಸಂಘರ್ಷಕ್ಕೆ ನೇರ ಕಾರಣವಾಗುತ್ತದೆ ಎಂದು ಪತ್ರದಲ್ಲಿ ಆಪಾದಿಸಲಾಗಿತ್ತು.

ಹಾಗಾಗಿ, ಜನತೆಯಲ್ಲಿ ಸಾಲಿಸಿಟರ್‌ ಜನರಲ್‌ ಕಚೇರಿಯ ಸಮಗ್ರತೆಯ ಬಗ್ಗೆ, ನಿಷ್ಪಕ್ಷತ್ವದ ಬಗ್ಗೆ ಅನುಮಾನಗಳು ಮೂಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಮೆಹ್ತಾ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದರಾದ ಡೆರಿಕ್‌ ಒ’ಬ್ರಿಯೆನ್‌, ಮಹುವಾ ಮೊಯಿತ್ರಾ ಹಾಗೂ ಸುಖೇಂದು ಶೇಖರ್‌ ರಾಯ್‌ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪತ್ರ ಮುಖೇನ ಒತ್ತಾಯಿಸಿದ್ದರು.

Related Stories

No stories found.
Kannada Bar & Bench
kannada.barandbench.com