[ಘನ ತ್ಯಾಜ್ಯ ವಿಲೇವಾರಿ ಅಸಮರ್ಪಕತೆ] ಬಿಬಿಎಂಪಿ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಸಿರುವ ಮೆಮೊದಲ್ಲಿ ಏನಿದೆ?

ಜನ ಕಸವನ್ನು ವಿಂಗಡಿಸಿ ನೀಡಿದರೂ, ಎಲ್ಲ ತ್ಯಾಜ್ಯವನ್ನೂ ಒಂದೇ ಜಾಗದಲ್ಲಿ ಸುರಿಯಲಾಗುತ್ತಿದೆ. ಮೂರು ದಿನಗಳಿಗೂ ಅಧಿಕ ಸಮಯದವರೆಗೆ ಆ ಕಸವನ್ನು ಅಲ್ಲೇ ಉಳಿಸಲಾಗುತ್ತಿದೆ ಎಂದು ಆಕ್ಷೇಪಿಸಿರುವ ಅರ್ಜಿದಾರರು.
BBMP
BBMP

ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಕಾಲ ಕಾಲಕ್ಕೆ ನೀಡಿರುವ ನಿರ್ದೇಶನಗಳನ್ನು ಪಾಲನೆ ಮಾಡಲು ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವಿಫಲವಾಗಿವೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿದಾರರ ಪರ ವಕೀಲರು ಬುಧವಾರ ಮೆಮೊ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಮೆಮೊ ಮೂಲಕ ವಿವರಣೆ ನೀಡಿದ್ದಾರೆ.

ಮೆಮೊದಲ್ಲಿನ ಪ್ರಮುಖ ಅಂಶಗಳು ಇಂತಿವೆ:

  • ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅರ್ಜಿಯನ್ನು 2015ರ ಡಿಸೆಂಬರ್‌ನಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಂಗಡಣೆಗೆ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಸಿ ಕಸ ಹಾಗೂ ಒಣ ಕಸ ವಿಂಗಡಿಸುವ ನಿಟ್ಟಿನಲ್ಲಿ ಸಾರ್ವಜನಿಕರನ್ನು ಉತ್ತೇಜಿಸಬೇಕು ಎಂದು ನಿರ್ದೇಶಿಸಿತ್ತು. ಆದರೆ, ಸದ್ಯ ತ್ಯಾಜ್ಯ ವಿಂಗಡಿಸುವ ಪ್ರಕ್ರಿಯೆ ಶೇ 10ರಷ್ಟು ಮಾತ್ರ ನಡೆಯುತ್ತಿದೆ. ಜನ ಕಸವನ್ನು ವಿಂಗಡಿಸಿ ನೀಡಿದರೂ, ಎಲ್ಲ ತ್ಯಾಜ್ಯವನ್ನೂ ಒಂದೇ ಜಾಗದಲ್ಲಿ ಸುರಿಯಲಾಗುತ್ತಿದೆ. ಮೂರು ದಿನಗಳಿಗೂ ಅಧಿಕ ಸಮಯದವರೆಗೆ ಆ ಕಸವನ್ನು ಅಲ್ಲೇ ಉಳಿಸಲಾಗುತ್ತಿದೆ. ಪಾಲಿಕೆ ಮತ್ತದರ ಗುತ್ತಿಗೆದಾರರು ತ್ಯಾಜ್ಯ ವಿಂಗಡಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.

  • ಘನ ತ್ಯಾಜ್ಯ ನಿರ್ವಹಣಾ ನಿಯಮ 2016ರ ಅನುಷ್ಠಾನಕ್ಕೆ ತರುವಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೂ ಹೆಚ್ಚಿನ ಜವಾಬ್ದಾರಿಗಳಿವೆ. ಆದ್ದರಿಂದ, ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ 2019ರ ಸೆಪ್ಟಂಬರ್‌ನಲ್ಲಿ ನಿರ್ದೇಶಿಸಿತ್ತು. ಆದರೆ, ಕೆಎಸ್‌ಪಿಸಿಬಿ ಈವರೆಗೂ ನ್ಯಾಯಾಲಯಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ.

  • ಸ್ವಚ್ಛ ಭಾರತ ಯೋಜನೆಯಡಿ ಕೇಂದ್ರ ಸರ್ಕಾರದಿಂದ 73 ಕೋಟಿ ರೂಪಾಯಿ ಅನುದಾನ ಪಡೆದಿರುವ ಬಿಬಿಎಂಪಿಯು ಆ ಹಣದಿಂದ ಕಾಂಪ್ಯಾಕ್ಟರ್‌ಗಳನ್ನು ಖರೀದಿಸಿದೆ. ತಲಾ 35 ಲಕ್ಷ ರೂಪಾಯಿಯಂತೆ 8 ಕೋಟಿಗೂ ಅಧಿಕ ಮೊತ್ತದಲ್ಲಿ ಒಟ್ಟು 25 ಕಾಂಪ್ಯಾಕ್ಟರ್‌ಗಳನ್ನು ಖರೀದಿಸಲಾಗಿದೆ. ಅವುಗಳಿಗೆ ವಾರ್ಷಿಕ ನಿರ್ವಹಣಾ ವೆಚ್ಚವಾಗಿ 1.97 ಕೋಟಿ ರೂಪಾಯಿಯಂತೆ ಒಟ್ಟು 5 ವರ್ಷಗಳಿಗೆ 9 ಕೋಟಿಗೂ ಅಧಿಕ ಮೊತ್ತ ಮೀಸಲಿಡಲಾಗಿದೆ. ಆದರೆ, ಕಾಂಪ್ಯಾಕ್ಟರ್‌ಗಳ ಬೆಲೆ ಪರಿಶೀಲಿಸಿದಾಗ ಒಂದು ಕಾಂಪ್ಯಾಕ್ಟರ್ ಟ್ರಕ್‌ನ ಬೆಲೆ 22 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. ಆದರೆ, ಬಿಬಿಎಂಪಿ ಪ್ರತಿ ಟ್ರಕ್‌ಗೆ 13 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಿದೆ ಎಂದು ಮೆಮೊದಲ್ಲಿ ವಿವರಿಸಲಾಗಿದೆ.

Also Read
ಬಿಬಿಎಂಪಿ ಆದೇಶ ಪಾಲನೆ ಸಂಬಂಧ ಮೆಮೊ ಸಲ್ಲಿಕೆ; ಸ್ಥಿತಿಗತಿ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ
Kannada Bar & Bench
kannada.barandbench.com