ಕೆಲ ನ್ಯಾಯಾಧೀಶರು ಸರ್ಕಾರದ ಪರ, ಕೆಲವರು ವಿರುದ್ಧ, ಎರಡೂ ತಪ್ಪಲ್ಲ: ಬೀಳ್ಕೊಡುಗೆ ವೇಳೆ ದೆಹಲಿ ಹೈಕೋರ್ಟ್ ಸಿಜೆ ಪಟೇಲ್

ನ್ಯಾಯಾಂಗ ಆಕ್ಟಿವಿಸಂ ಮತ್ತು ನ್ಯಾಯಾಂಗ ಸಂಯಮದ ನಡುವೆ ಯಾವಾಗಲೂ ಸಮತೋಲನ ಇರಬೇಕು ಎಂದು ನ್ಯಾಯಮೂರ್ತಿಗಳು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ತಿಳಿಸಿದರು.
Delhi High Court Chief Justice Dhirubhai Naranbhai Patel

Delhi High Court Chief Justice Dhirubhai Naranbhai Patel

Published on

ಪ್ರಕರಣವನ್ನು ನಿರ್ಧರಿಸುವ ವೇಳೆ ವಿವಿಧ ನ್ಯಾಯಾಧೀಶರು ವಿವಿಧ ತತ್ವಗಳನ್ನು ಹೊಂದಿದ್ದು ಅಂತಹ ಎಲ್ಲ ವಿಧಾನಗಳು ಕಾನೂನಿನ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತವೆ ಎಂದು ದೆಹಲಿ ಹೈಕೋರ್ಟ್‌ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಶುಕ್ರವಾರ ಅಭಿಪ್ರಾಯಪಟ್ಟರು.

ತಮ್ಮ ಬೀಳ್ಕೊಡುಗೆ ಅಂಗವಾಗಿ ದೆಹಲಿ ಹೈಕೋರ್ಟ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೂರ್ಣ ನ್ಯಾಯಾಲಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

"ಈ ವಿಧಾನಗಳಲ್ಲಿ ಯಾವುದೂ ತಪ್ಪಲ್ಲ ಏಕೆಂದರೆ ಈ ಪ್ರತಿಯೊಂದು ವಿಧಾನದ ಮೂಲಕ ನೀಡಲಾದ ತೀರ್ಪುಗಳು ಕಾನೂನಿನ ಬೆಳವಣಿಗೆಗೆ ಕಾರಣವಾಗುತ್ತವೆ" ಎಂದ ಅವರು “ನ್ಯಾಯಾಂಗ ಆಕ್ಟಿವಿಸಂ ಮತ್ತು ನ್ಯಾಯಾಂಗ ಸಂಯಮದ ನಡುವೆ ಯಾವಾಗಲೂ ಸಮತೋಲನ ಇರಬೇಕು. ನ್ಯಾಯ ಮತ್ತು ಕಾನೂನಿನ ನಡುವೆ ಕಂದರ ಉಂಟಾದಾಗಲೆಲ್ಲಾ ನ್ಯಾಯಾಂಗ ತನ್ನದೇ ಆದ ಪಾತ್ರ ನಿರ್ವಹಿಸುತ್ತದೆ. ಆದರೆ ನ್ಯಾಯಾಂಗ ಆಕ್ಟಿವಿಸಂ ಮತ್ತು ನ್ಯಾಯಾಂಗ ಸಂಯಮದ ನಡುವೆ ಯಾವಾಗಲೂ ಸಮತೋಲನ ಇರಬೇಕು ಎಂದು ತಿಳಿಸಿದರು.

ವಿಶಿಷ್ಟ ಅಧಿಕಾರ ಮತ್ತು ಹೊಣೆಯನ್ನು ಪಡೆದ ಮತ್ತು ತನ್ನ ಆದೇಶಗಳ ಮೂಲಕ ನ್ಯಾಯ ಒದಗಿಸುವ ಹಾಗೂ ವಿವಾದಗಳನ್ನು ಕೊನೆಗಾಣಿಸುವ ಕಾರ್ಯ ನಿರ್ವಹಿಸುವ ನ್ಯಾಯಾಂಗ ಗಣರಾಜ್ಯದ ವಿಶಿಷ್ಟ ಸಂಸ್ಥೆ ಎಂದು ಅವರು ಮೆಚ್ಚುಗೆ ಸೂಚಿಸಿದರು. ಕೋವಿಡ್‌ ಕಾಲದಲ್ಲಿ ನ್ಯಾಯಾಲಯಗಳು ಕಾರ್ಯ ನಿರ್ವಹಿಸಿದ ಬಗೆಯನ್ನೂ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಮಾರ್ಚ್ 13, 1960 ರಂದು ಜನಿಸಿದ ನ್ಯಾಯಮೂರ್ತಿ ಪಟೇಲ್ ಅವರು 1984ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಗುಜರಾತ್ ಹೈಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದರು. 1999ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಮತ್ತು ಜುಲೈ 2001 ರಲ್ಲಿ ಕೇಂದ್ರ ಸರ್ಕಾರದ ಹಿರಿಯ ಸ್ಥಾಯಿ ವಕೀಲರಾಗಿ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದರು. ಮಾರ್ಚ್ 7, 2004ರಂದು ಗುಜರಾತ್‌ನ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ನ್ಯಾ. ಪಟೇಲ್‌ ಜನವರಿ 25, 2006ರಂದು ಗುಜರಾತ್‌ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ಅವರು ಜೂನ್ 7, 2019 ರಂದು ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.

ನಿವೃತ್ತಿಯ ಬಳಿಕ, ಅವರು ನಾಲ್ಕು ವರ್ಷಗಳ ಅವಧಿಗೆ ದೂರಸಂಪರ್ಕ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿಯ (ಟಿಡಿಎಸ್ಎಟಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ರಾಕೇಶ್‌ ಅಸ್ಥಾನಾ ಅವರನ್ನು ದೆಹಲಿ ಪೊಲೀಸ್‌ ಕಮಿಷನರ್‌ ಆಗಿ ನೇಮಕ ಮಾಡುವ ಸಂಬಂಧದ ಪ್ರಕರಣ, ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಪ್ರಕರಣ, ತೈಲ ಮಾರುಕಟ್ಟೆ ಕಂಪನಿಗಳು ಹೊರಡಿಸಿದ ಮಾರ್ಕೆಟಿಂಗ್ ಶಿಸ್ತು ಮಾರ್ಗಸೂಚಿಗಳಿಗೆ ಪೆಟ್ರೋಲಿಯಂ ವಿತರಕರ ಸಂಘದ ಎತ್ತಿದ್ದ ತಕರಾರು ಸೇರಿದಂತೆ ಹಲವು ಪ್ರಮುಖ ಪ್ರಕರಣಗಳನ್ನು ಅವರು ದೆಹಲಿ ಹೈಕೋರ್ಟ್‌ ಸಿಜೆಯಾಗಿ ವಿಚಾರಣೆ ನಡೆಸಿದ್ದಾರೆ.

Kannada Bar & Bench
kannada.barandbench.com