ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ನಾಯಕಿ ದಿವಂಗತ ಸುಷ್ಮ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಆಯ್ಕೆ ಪ್ರಶ್ನಿಸಿ ಎಎಪಿ ನಾಯಕ ಸೋಮನಾಥ್ ಭಾರ್ತಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾನ್ಸುರಿ ಅವರು ಭಾರ್ತಿ ಅವರನ್ನು ಮಣಿಸಿದ್ದರು. ರಾಜಧಾನಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.
ಮೇ 25, 2024 ರಂದು ದೆಹಲಿಯಲ್ಲಿ ನಡೆದ ಮತದಾನದ ವೇಳೆ ಬಾನ್ಸುರಿ ಮತ್ತವರ ಚುನಾವಣಾ ಏಜೆಂಟ್ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಭಾರ್ತಿ ಆರೋಪಿಸಿದ್ದಾರೆ.
ಬಾನ್ಸುರಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಕಾರ್ಯಕರ್ತರು ಹಣ, ಸೀರೆ ಮತ್ತಿತರ ಉಡುಪುಗಳನ್ನು ನಿವಾಸಿಗಳಿಗೆ ಹಂಚಿದ್ದಾರೆ.
ಇದಕ್ಕೆ ಎಎಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರೂ ಅವರ ಮಾತುಗಳಿಗೆ ಕಿವಿಗೊಡದೆ ಅವುಗಳನ್ನು ಹಂಚುತ್ತಾ ಹೋದರು.
ಮತದಾನದ ದಿನ ಬಾನ್ಸುರಿ ಅವರ ಏಜೆಂಟ್‌ಗಳು ತಮ್ಮ ಮತಪತ್ರ ಸಂಖ್ಯೆ, ಫೋಟೋ, ಚುನಾವಣಾ ಚಿಹ್ನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಪ್ರದರ್ಶಿಸುವ ಕರಪತ್ರಗಳನ್ನು ಹೊಂದಿದ್ದರು .
ಬಿಎಸ್‌ಪಿ ಅಭ್ಯರ್ಥಿ ರಾಜ್ ಕುಮಾರ್ ಆನಂದ್ ಅವರು ಈ ಹಿಂದೆ ದೆಹಲಿಯ ಎಎಪಿ ಸರ್ಕಾರದ ಸಚಿವರಾಗಿದ್ದ ಕಾರಣ ʼಇಂಡಿಯಾʼ ಮೈತ್ರಿಕೂಟದ ಮತಗಳನ್ನು ಕಸಿದು ಬಾನ್ಸುರಿ ಅವರಿಗೆ ಸಹಾಯ ಮಾಡಲು ಬಿಜೆಪಿ ಅವರನ್ನು ಕಣಕ್ಕಿಳಿಸಿತು.
ಕೇಂದ್ರ ತನಿಖಾ ಸಂಸ್ಥೆಗಳ ಒತ್ತಡಕ್ಕೆ ಮಣಿದು ಎಎಪಿಗೆ ರಾಜೀನಾಮೆ ನೀಡಿದ ಆನಂದ್ ಬಿಎಸ್‌ಪಿಯಿಂದ ಸ್ಪರ್ಧಿಸಿ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.