ವೈವಾಹಿಕ ಸಂಬಂಧ ಕುರಿತ ವಿಚಾರಣೆಗಳು ಸುಪ್ರೀಂಕೋರ್ಟ್‌ನಲ್ಲಿ ಸಾಮಾನ್ಯವಾದರೂ ಒಬ್ಬ ಮಗ ತನ್ನ ತಾಯಿಯ ದೆಸೆಯಿಂದ ಅನುಭವಿಸಿದ ಮಾನಸಿಕವಾಗಿ ಆಘಾತಕಾರಿಯಾದ ಬಾಲ್ಯವನ್ನು ತೆರೆದ ನ್ಯಾಯಾಲಯದಲ್ಲಿ ನೆನೆಯುವುದು ಮತ್ತು ತನ್ನ ತಾಯಿಯೊಂದಿಗೆ ಮಾತನಾಡು ಎಂಬ ನ್ಯಾಯಾಲಯದ ಕೋರಿಕೆಯನ್ನು ನಿರಾಕರಿಸುವುದು ನಿತ್ಯ ನಡೆಯುವಂಥದ್ದಲ್ಲ.
ತನ್ನ ತಾಯಿಯೊಂದಿಗಿನ ನಂಟು ಮತ್ತೆ ಆರಂಭಿಸುವಂತೆ 27 ವರ್ಷದ ಯುವಕನ ಮನವೊಲಿಸುವಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಸೋಮವಾರ ವಿಫಲವಾಯಿತು. ಪತ್ನಿಯಿಂದ ವಿಚ್ಛೇದನ ಕೋರಿ ಪತಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿರುವ ವೈವಾಹಿಕ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪತ್ನಿ ವಿಚ್ಛೇದನಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಏಳನೇ ವಯಸ್ಸಿಗೆ ತನ್ನ ತಾಯಿಯಿಂದ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿ ಕಠೋರ ಕಾನೂನು ಹೋರಾಟದ ನಡುವೆ ಸಿಲುಕಿದ ಮಗ ಅಂದಿನಿಂದ ತನ್ನ ತಂದೆಯೊಂದಿಗೇ ವಾಸಿಸುತ್ತಿದ್ದ. ತಾಯಿ ಕಡೆಯ ವಕೀಲರು ಮಗನೊಂದಿಗೆ ಆಕೆ ಒಮ್ಮೆ ಮಾತನಾಡಲು ಅವಕಾಶ ನೀಡಬೇಕೆಂದು ನ್ಯಾಯಾಲಯ ಕೋರಿದಾಗ, ಖುದ್ದು ಹಾಜರಿದ್ದ ಮಗ ಅದನ್ನು ನಿರಾಕರಿಸಿದ.
ರಾಜಿ ಸಂಧಾನಕ್ಕೆ ಯತ್ನಿಸಿದ ನ್ಯಾ. ಡಿ ವೈ ಚಂದ್ರಚೂಡ್, "ಆಕೆ ನಿನ್ನ ತಾಯಿಯಲ್ಲವೇ ಅವಳೊಂದಿಗೆ ಮಾತನಾಡು" ಎಂದರು. ಆಗ ತನ್ನ ತಾಯಿಯಿಂದ ಅನುಭವಿಸಿದ ಸಂಕಷ್ಟಗಳನ್ನು ಮಗ ಬಿಚ್ಚಿಟ್ಟ.
“ಇದು ಆಘಾತಕಾರಿ ನೆನಪುಗಳನ್ನು ಮರುಕಳಿಸುತ್ತದೆ. ನನ್ನನ್ನು ಶೌಚಗೃಹದಲ್ಲಿ ಕೂಡಿಹಾಕಿ ಥಳಿಸುತ್ತಿದ್ದರು. ನಾನು ತಂದೆಯಲ್ಲದೇ ಇರಬಹದು. ಆದರೆ ಮಕ್ಕಳನ್ನು ಬೆಳೆಸುವ ರೀತಿ ನಿಜಕ್ಕೂ ಇದಲ್ಲ. ನನಗೆ ಆಕೆ (ಅಮ್ಮ) ಚೆನ್ನಾಗಿ ಹೊಡೆಯುತ್ತಿದ್ದರು. ಆಗ ನನಗೆ ಬರೀ ಏಳು ವರ್ಷ. ಆದರೆ, ಅಪ್ಪ ಮಾತ್ರ ನನ್ನ ಮೇಲೆ ಯಾವತ್ತೂ ಕೈ ಮಾಡಲಿಲ್ಲ” ಎಂದು ಮಗ ತಿಳಿಸಿದ.
ತಾಯಿಯ ಕಡೆಯ ವಕೀಲರು ಇದೊಂದು ತಥಾಕಥಿತ ಹೇಳಿಕೆ ಎಂದು ಆಕ್ಷೇಪಿಸಿದರು. ಆದರೆ ನ್ಯಾಯಾಲಯ ಈ ವಾದ ಒಪ್ಪಲಿಲ್ಲ. ಬಳಿಕ ತಂದೆಯ ಪರ ವಕೀಲರು “ತಾಯಿ ಎಂದಿಗೂ ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ನ್ಯಾಯಾಲಯವನ್ನು ಕೇಳಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯಕ್ಕೆ ಅರುಹಿದರು.