

ಪರಿಸರ ಹೋರಾಟಗಾರ, ಚಿಂತಕ ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದು ನ್ಯಾಯಸಮ್ಮತವಾಗಿದ್ದು ಈ ವೇಳೆ ಎಲ್ಲಾ ಪ್ರಕ್ರಿಯಾತ್ಮಕ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಲಡಾಖ್ ಆಡಳಿತ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠದೆದುರು ವಾಂಗ್‌ಚುಕ್ ಅವರ ಬಂಧನ ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸಲ್ಲಿಸಿದ್ದ ಅರ್ಜಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧ ವ್ಯಕ್ತಪಡಿಸಿದರು. ಸೋನಮ್ ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಾಗಿದೆ ಎಂದರು.
ಪಾಕಿಸ್ತಾನ ಮತ್ತು ಚೀನಾಗೆ ಹೊಂದಿಕೊಂಡಿರುವ ಗಡಿಭಾಗದಲ್ಲಿ ವಾಂಗ್‌ಚುಕ್ ಜನರನ್ನು ಪ್ರಚೋದಿಸುವ ಭಾಷಣಗಳನ್ನು ಮಾಡುತ್ತಿದ್ದರು. ಲಡಾಖ್ ಜನರಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕಿಲ್ಲ ಎಂದು ಹೇಳುವ ಮೂಲಕ, ಚೀನಾ–ಟಿಬೆಟ್‌ಗೆ ಇರುವ ಸ್ವಾಯತ್ತ ಹಕ್ಕುಗಳನ್ನು ಉದಾಹರಿಸಿರುವುದು ದೇಶದ ಭದ್ರತೆ ಮತ್ತು ಸಾರ್ವಜನಿಕ ಶಾಂತಿಗೆ ಅಪಾಯ ಉಂಟುಮಾಡುವಂತಹದ್ದು. ಇಂತಹ ಹೇಳಿಕೆಗಳು ಭಾರತಕ್ಕೆ ಭದ್ರತಾ ಅಪಾಯ, ಸಾರ್ವಜನಿಕ ಶಾಂತಿಯ ವ್ಯತ್ಯಯ ಮತ್ತು ಸರಬರಾಜು ವ್ಯವಸ್ಥೆಗೆ ಅಡಚಣೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಮೆಹ್ತಾ ವಾದಿಸಿದರು.
ಈ ವೇಳೆ ಅವರು,""ಒಬ್ಬ ಚೀನೀ ಪ್ರಜೆ ಈ ರೀತಿ ವಾದಿಸಿದರೆ ನನಗೆ ಅರ್ಥವಾಗುತ್ತದೆ. ಇದು ಸ್ಯಾಂಡ್‌ವಿಚ್‌ನಂತಿದೆ. ಈ ಬದಿಯಲ್ಲಿ ಬ್ರೆಡ್ ,ಆ ಬದಿಯಲ್ಲಿಯೂ ಬ್ರೆಡ್. ಬ್ರೆಡ್ ಎಂದರೆ ಗಾಂಧೀಜಿ. ಇದರ ನಡುವೆ ಇತರ ವಿಷಯಗಳು ಬರುತ್ತವೆ. ಈ ಮಧ್ಯದಲ್ಲಿ ಬರುವ ವಿಷಯಗಳ ಬಗ್ಗೆಯೇ ಬಂಧನದ ಅಧಿಕಾರವಿರುವ ಸಕ್ಷಮ ಪ್ರಾಧಿಕಾರವು ಕಾಳಜಿ ವಹಿಸುತ್ತಿರುವುದು. ಏಕೆಂದರೆ, ಆ ವ್ಯಕ್ತಿ (ವಾಂಗ್‌ಚುಕ್) ಪಾಕಿಸ್ತಾನ ಮತ್ತು ಚೀನಾದ ಗಡಿಯಲ್ಲಿರುವ ಗಡಿ ಪ್ರದೇಶದಲ್ಲಿ ಜನರನ್ನು ಪ್ರಚೋದಿಸುತ್ತಿದ್ದಾರೆ" ಎಂದು ಮೆಹ್ತಾ ಹೇಳಿದರು.
ವಾಂಗ್‌ಚುಕ್ ಅವರು ಕೇಂದ್ರ ಸರ್ಕಾರವನ್ನು ಬೇರೆಯಾಗಿ ಬಿಂಬಿಸಿರುವುದು ಪ್ರತ್ಯೇಕತಾವಾದಿ ಮನೋಭಾವವನ್ನು ತೋರಿಸುತ್ತದೆ. ಜೊತೆಗೆ ಜೆನ್ ಜೀ ಪೀಳಿಗೆಯನ್ನು ಹಿಂಸಾಚಾರ ಮತ್ತು ಆಂತರಿಕ ಯುದ್ಧ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅವರ ಬಂಧನ ಅಗತ್ಯವಾಗಿದ್ದು, ಇದು ಎನ್‌ಎಸ್‌ಎ ಕಾಯಿದೆಯ ಮೂಲ ಉದ್ದೇಶಕ್ಕೆ ಅನುಗುಣವಾಗಿಯೇ ಇದೆ ಎಂದು ಮೆಹ್ತಾ ಸಮರ್ಥಿಸಿಕೊಂಡರು.
ಎನ್‌ಎಸ್‌ಎ ಅಡಿ ಅಧಿಕಾರಿಗಳಿಗೆ ಕೆಲಮಟ್ಟಿನ ಸ್ವಾತಂತ್ರ್ಯ ಇರುವುದರಿಂದ ಬಂಧನ ಆದೇಶ ಮತ್ತು ಅದರ ಆಧಾರಗಳನ್ನು ಒಂದೇ ರೀತಿಯಲ್ಲಿ ಉಲ್ಲೇಖಿಸಿರುವುದು ಕಾನೂನುಬದ್ಧವಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ಪ್ರಾದೇಶಿಕ ಸೂಕ್ಷ್ಮಗಳಿರುವುದರಿಂದ, ಈ ಪ್ರಕರಣವನ್ನು ಆಯಾ ರಾಜ್ಯಗಳ ಸಂದರ್ಭದ ಆಧಾರದಲ್ಲೇ ನೋಡಬೇಕು ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಪ್ರಕರಣದಲ್ಲಿ ಮೆಹ್ತಾ ಅವರು ಇಂದು ತಮ್ಮ ವಾದ ಮುಕ್ತಾಯಗೊಳಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಬುಧವಾರ ವಾದ ಮಂಡಿಸುವ ಸಾಧ್ಯತೆ ಇದೆ.
ಕೇಂದ್ರ ಮತ್ತು ಲಡಾಖ್ ಆಡಳಿತವನ್ನು ಎಸ್‌ಜಿ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಪ್ರತಿನಿಧಿಸಿದರೆ ರಾಜಸ್ಥಾನ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಿವ ಮಂಗಲ್ ಶರ್ಮಾ ಮತ್ತು ವಕೀಲರಾದ ಅರ್ಕಾಜ್ ಕುಮಾರ್, ಆಸ್ತಾ ಸಿಂಗ್ ಮತ್ತು ಅಮನ್ ಮೆಹ್ತಾ ಹಾಜರಿದ್ದರು.